ಬೆಂಗಳೂರು: ನಟ ದರ್ಶನ್ ಹಾಗೂ ಗ್ಯಾಂಗ್ ನಿಂದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಿ ಬದಲಾಗಿದ್ದು, ನ್ಯಾಯಾಲಯದಲ್ಲಿ ಕೊಲೆ ನಡೆದ ಸಂದ್ರಭದ ಬಗ್ಗೆ ಹಾಗೂ ನಟ ದರ್ಶನ್ ಅಟ್ಟಹಾಸದ ಬಗ್ಗೆ ಇಂಚಿಂಚೂ ಮಾಹಿತಿ ಬಿಚ್ಚಿಟ್ಟಿದ್ದಾನೆ ಎಂದು ತಿಳಿದುಬಂದಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದ 14ನೇ ಆರೋಪಿ ಆಗಿರುವ ಪ್ರದೋಶ್ ಮಾಫಿ ಸಾಕ್ಷಿಯಾಗಿ ಬದಲಾಗಿದ್ದು, ಬೆಂಗಳೂರಿನ 59ನೇ ಸೆಷನ್ಸ್ ನ್ಯಾಯಾಲಯದ ಮುಂದೆ ಸಾಕ್ಷಿ ದಾಖಲಿಸಿದ್ದಾರೆ. ಪ್ರದೋಶ್ ಅವರ ಸಾಕ್ಷಿ ಹೇಳಿಕೆಯನ್ನು ತಡೆಯಲು ದರ್ಶನ್ ಪರ ವಕೀಲರು ಇನ್ನಿಲ್ಲದ ಪ್ರಯತ್ನ ಮಾಡಿದರಾದರೂ ಸಾಧ್ಯವಾಗಿಲ್ಲ, (ಸೆಪ್ಟೆಂಬರ್ 28ರಂದು ನ್ಯಾಯಾಲಯದಲ್ಲಿ ಸುಮಾರು ಮೂರು ಗಂಟೆಗಳ ಕಾಲ ಪ್ರದೋಷ್ ಸಾಕ್ಷ್ಯ ನುಡಿದಿದ್ದು, ಪ್ರಕರಣದ ಭೀಕರತೆಯನ್ನು ವಿವರಿಸಿದ್ದಾರೆ.
ರೇಣುಕಾಸ್ವಾಮಿ ವಿಚಾರವಾಗಿ ದರ್ಶನ್ ಹೇಗೆಲ್ಲ ನಡೆದುಕೊಂಡರು.ಹೇಗೆ ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಿ ಅಟ್ಟಹಾಸ ಮೆರೆದರು ಎಂಬುದನ್ನು ಸಹ ವಿವರಿಸಿದ್ದಾರೆ.
ಆರ್ಆರ್ ನಗರದ ಸ್ಟೋನಿ ಬ್ರೂಕ್‌ನಲ್ಲಿ ಪ್ರದೋಶ್, ವಿನಯ್, ದರ್ಶನ್, ಚಿಕ್ಕಣ್ಣ ಇನ್ನಿತರರ ನಡುವೆ ನಡೆದ ಸಭೆಯಿಂದ ಆರಂಭಗೊಂಡು, ಪಟ್ಟಣಗೆರೆ ಶೆಡ್‌ನಲ್ಲಿ ನಡೆದ ಘಟನೆಗಳ ವರೆಗೆ ಅಂದು ನಡೆದ ಪ್ರತಿಯೊಂದು ಕೃತ್ಯವನ್ನು ಪ್ರದೋಷ್ ನ್ಯಾಯಾಲಯದ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ವಿಶೇಷವಾಗಿ ದರ್ಶನ್ ಹಾಗೂ ಇನ್ನೂ ಕೆಲವರು ರೇಣುಕಾಸ್ವಾಮಿ ಮೇಲೆ ಎಸಗಿದ ಅಮಾನವೀಯ ಹಲ್ಲೆ, ರೇಣುಕಾಸ್ವಾಮಿಯನ್ನು ನಡೆಸಿಕೊಂಡ ರೀತಿಯ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದಾರೆ.
ರೇಣುಕಾಸ್ವಾಮಿ, ಪವಿತ್ರಾ ಗೌಡಗೆ ಮಾಡಿದ ಸಂದೇಶದಿಂದಾಗಿ ಸಿಟ್ಟಿನಲ್ಲಿದ್ದ ದರ್ಶನ್, ಪಟ್ಟಣಗೆರೆ ಶೆಡ್‌ನಲ್ಲಿ ಹಲವಾರು ಬಾರಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿರುವುದಾಗಿ ಪ್ರತ್ಯಕ್ಷದರ್ಶಿ ಪ್ರದೋಷ್ ಹೇಳಿದ್ದಾರೆ. ಪವಿತ್ರಾ ಗೌಡ ಸಹ ಚಪ್ಪಲಿಯಲ್ಲಿ ರೇಣುಕಾಸ್ವಾಮಿ ಕೆನ್ನೆಗೆ ಹೊಡೆದ ವಿಷಯ. ರೇಣುಕಾಸ್ವಾಮಿ ಪವಿತ್ರಾ ಗೌಡ ಮತ್ತು ದರ್ಶನ್ ಕಾಲಿಗೆ ಬಿದ್ದು ಕ್ಷಮೆ ಕೇಳಿದ ವಿಷಯಗಳನ್ನು ಅಂದು ನಡೆದಂತೆ ಎಲವನ್ನೂ ನ್ಯಾಯಾಲಯದ ಮುಂದೆ ಪ್ರದೋಶ್ ವಿವರಿಸಿದ್ದಾರೆ.
ಪ್ರದೋಷ್ ಹೇಳಿಕೆಯನ್ನು ಭದ್ರವಾಗಿ ಇಡಲಾಗಿದೆ. ಇಂದು ಕೂಡ ಪ್ರದೋಷ್ ಕೋರ್ಟ್ ಗೆ ಹಾಜರಾಗಿ ಹೇಳಿಕೆ ಮುಂದುವರೆಸಲಿದ್ದು, ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಕಲಬುರಗಿಯಲ್ಲಿ ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ
ಕಲಬುರಗಿ: ಅನುಮಾನ ಎಂಬ ಪಿಶಾಚಿ ಒಮ್ಮೊ ತಲೆಗೆ ಹೊಕ್ಕರೆ ವಿಚಾರ ವಿವೇಚನೆಯನ್ನೇ ಮನುಷ್ಯ ಕಳೆದುಕೊಂಡು ಮೃಗನಂತೆ ವರ್ತಿಸುತ್ತಾನೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಪತ್ನಿ ಮೇಲಿನ ಸಂಶಯಕ್ಕೆ ಪತಿ ಮಹಾಶಯನೊಬ್ಬ ಪತ್ನಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಕಲಬುರಗಿ ನಗರದ ಶರಣಶಿರಸಗಿ ಬಳಿ ಈ ಘಟನೆ ನಡೆದಿದೆ. ರೇಣುಕಾ ಶಿಂಧೆ (38) ಪತಿಯಿಂದಲೇ ಕೊಲೆಯಾದ ಮಹಿಳೆ. ಕಳೆದ ಕೆಲ ವರ್ಷಗಳ ಹಿಂದೆ ಸಂಜಯ್ ಜೊತೆ ಮದುವೆಯಾಗಿ ಶರಣಸಿರಸಗಿ ಬಳಿ ವಾಸವಾಗಿದ್ದರು.
ಪತ್ನಿ ರೇಣುಕಾ ಬೇರೊಬ್ಬ ಪುರುಷನ ಜೊತೆ ಅನೈತಿಕ ಸಂಬಂಧ ಹೊಂದಿರಬಹುದು ಎಂಬ ಅನಗತ್ಯ ಸಂಶಯಕ್ಕೆ ಪದೇ ಪದೇ ಪತ್ನಿಯೊಂದಿಗೆ ಜಗಳವಡುತ್ತಿದ್ದ. ನಿನ್ನೆ ರಾತ್ರಿ ಸಹ ಇದೇ ವಿಚಾರವಾಗಿ ಇಬ್ಬರ ನಡುವೆ ಮತ್ತೆ ಜಗಳವಾಗಿದೆ. ಈ ವೇಳೆ ಕೋಪಗೊಂಡ ಸಂಜಯ್, ರೇಣುಕಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಪತಿ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

