ಬೆಂಗಳೂರು: ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿಚಾರವಾಗಿ ರಾಜಕೀಯ ವಾಕ್ಸಮರ ಮುಂದುವರಿದಿದೆ. ಈ ನಡುವೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ವಿರುದ್ಧ ಪ್ರಶ್ನೆ ಎತ್ತಿದ್ದು, “ಜ್ಞಾನೇಶ್ ಕುಮಾರ್ ಅವರನ್ನು ಎಲ್ಲಿ ಬಚ್ಚಿಟ್ಟಿದ್ದೀರಿ?” ಎಂದು ಕೇಳಿದ್ದಾರೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಒಂದು ಉತ್ತರ ಸಿಗದ ಪ್ರಶ್ನೆ.. ಸ್ವಾಯುತ್ತ ಸಂಸ್ಥೆ ಎನಿಸಿಕೊಳ್ಳುವ ಚುನಾವಣಾ ಆಯೋಗವನ್ನು ಪ್ರಶ್ನಿಸಿದಾಗಲೆಲ್ಲಾ ಅದರ ಪರವಾಗಿ ಸಮರ್ಥನೆಗೆ ಬಿಜೆಪಿ ಮುನ್ನುಗ್ಗಿ ಬರುವುದೇಕೆ? ಚುನಾವಣಾ ಆಯೋಗ ಬಿಜೆಪಿಯ “ಎಲೆಕ್ಷನ್ ಮೋರ್ಚಾ”ವೇ? ಬಿಜೆಪಿಗೂ ಸ್ವಾಯುತ್ತ ಸಂಸ್ಥೆಯಾದ ಚುನಾವಣಾ ಆಯೋಗಕ್ಕೂ ಏನು ಅವಿನಾಭಾವ ಸಂಬಂಧ? “ಆಯೋಗ” ಎಂದರೆ ಒಬ್ಬ ವ್ಯಕ್ತಿಯಲ್ಲ, ಆ ಸಂಸ್ಥೆಯಲ್ಲಿರುವ ಸದಸ್ಯರೆಲ್ಲರೂ ಸೇರಿ ಆಯೋಗ ಎನಿಸಿಕೊಳ್ಳುತ್ತದೆ, ಸರ್ವಾನುಮತದ ನಿರ್ಧಾರಗಳು ಮಾತ್ರ ಆಯೋಗದ ನಿರ್ಧಾರ ಎನಿಸಿಕೊಳ್ಳುತ್ತದೆ, ಆದರೆ, ಪ್ರಸ್ತುತ ಕೇಂದ್ರ ಚುನಾವಣಾ ಆಯೋಗದ ನಿರ್ಧಾರಗಳು ಕೇವಲ ಒಬ್ಬ ವ್ಯಕ್ತಿಯ ನಿರ್ಧಾರವಾಗಿರುವುದು ಬಯಲಾಗಿದೆ. ಹೀಗಾಗಿ ಆ ಎಲ್ಲಾ ನಿರ್ಧಾರಗಳ ಆಧಾರದಲ್ಲಿ ನಡೆಯುತ್ತಿರುವ ಪ್ರಕ್ರಿಯೆಗಳು ಕಾನೂನು ಬಾಹಿರ ಮತ್ತು ಅನರ್ಹ ಪ್ರಕ್ರಿಯೆಗಳಾಗಿವೆ. ಮತ್ತೊಂದು ಪ್ರಶ್ನೆ.. ಈ ಹಿಂದೆ ಶ್ರೀ ರಾಹುಲ್ ಗಾಂಧಿಯವರು ಓಟ್ ಚೋರಿಯನ್ನು ಸಾಕ್ಷಿ ಸಮೇತ ದೇಶದ ಮುಂದಿಟ್ಟಾಗ ತಕ್ಷಣವೇ ರಾಜಕೀಯ ಪಕ್ಷದಂತೆ ಪತ್ರಿಕಾಗೋಷ್ಠಿ ನಡೆಸಿದ CEC ಜ್ಞಾನೇಶ್ ಕುಮಾರ್ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯ ಪ್ರಶ್ನೆ ಎದ್ದಿರುವಾಗ ನಾಪತ್ತೆಯಾಗಿದ್ದಾರೆ! ಅವರು ಪತ್ರಿಕಾಗೋಷ್ಠಿ ಮಾಡುವ ಬದಲು ಬಿಜೆಪಿ ವಕ್ತಾರಿಕೆ ನಡೆಸುತ್ತಿದೆ. ಬಿಜೆಪಿಗೆ ಕೇಳುವ ಒಂದು ಬಹುಮುಖ್ಯ ಪ್ರಶ್ನೆ, ಜ್ಞಾನೇಶ್ ಕುಮಾರ್ ರನ್ನು ಎಲ್ಲಿ ಬಚ್ಚಿಟ್ಟಿದ್ದೀರಿ? ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಜ್ಞಾನೇಶ್ ಕುಮಾರ್ ರಾಜೀನಾಮೆಗೆ 24 ಗಂಟೆಗಳ ಗಡುವು
ವಿಶೇಷ ತೀವ್ರ ಪರಿಷ್ಕರಣೆ (SIR) ಮೂಲಕ ಮತದಾರರ ಪಟ್ಟಿಯಲ್ಲಿನ ಹೆಸರುಗಳ ಬದಲಾವಣೆ ವಿಚಾರವಾಗಿ ವಿವಾದ ಮುಂದುವರಿದಿರುವ ಬೆನ್ನಲ್ಲೇ, ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಕಾಕ್ರೋಚ್ ಜನತಾ ಪಾರ್ಟಿ (CJP) ಮತ್ತೆ ಗಡುವು ನೀಡಿದೆ. ಸೆಪ್ಟೆಂಬರ್ 24ರಂದು ನೀಡಿದ್ದ 48 ಗಂಟೆಗಳ ಗಡುವಿನ ಬಳಿಕ, ಇದೀಗ 24 ಗಂಟೆಗಳೊಳಗೆ ರಾಜೀನಾಮೆ ನೀಡಬೇಕು ಎಂದು ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಹೇಳಿದ್ದಾರೆ. ಗಡುವಿನೊಳಗೆ ರಾಜೀನಾಮೆ ನೀಡದಿದ್ದರೆ ಅಕ್ಟೋಬರ್ 2ರಿಂದ ಮುಂಬೈನಿಂದ ರಾಷ್ಟ್ರವ್ಯಾಪಿ ಪ್ರತಿಭಟನೆ ಆರಂಭಿಸುವುದಾಗಿ ಅವರು ಘೋಷಿಸಿದ್ದಾರೆ.
CJP ತನ್ನ ‘Election Commission Thik Karo’ ಅಭಿಯಾನದ ಪ್ರಮುಖ ಅಂಶವಾಗಿ SIR ಪ್ರಕ್ರಿಯೆಯನ್ನು ಮುಂದಿಟ್ಟಿದೆ. ವರದಿಗಳ ಪ್ರಕಾರ, 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕರಡು ಮತದಾರರ ಪಟ್ಟಿಗಳಲ್ಲಿ 13 ಕೋಟಿಗೂ ಹೆಚ್ಚು ಹೆಸರುಗಳು ಕಡಿಮೆಯಾಗಿವೆ. ದೆಹಲಿ ಮತ್ತು ಮಹಾರಾಷ್ಟ್ರದ ಕರಡು ಪಟ್ಟಿಗಳಲ್ಲೂ ಮತದಾರರ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ದಾಖಲಾಗಿದೆ.
ಆದರೆ, ಕರಡು ಪಟ್ಟಿಯಿಂದ ಹೆಸರು ಕಡಿಮೆಯಾಗಿರುವುದೇ ಅಂತಿಮವಾಗಿ ಮತದಾನದ ಹಕ್ಕು ಕಳೆದುಕೊಂಡಿರುವುದಕ್ಕೆ ಸಮನಲ್ಲ. SIR ಪ್ರಕ್ರಿಯೆಯಲ್ಲಿ ಪರಿಶೀಲನೆ, ಆಕ್ಷೇಪಣೆ ಹಾಗೂ ಅರ್ಹ ಮತದಾರರನ್ನು ಮರುಸೇರ್ಪಡೆಗೊಳಿಸುವ ಅವಕಾಶಗಳಿವೆ. ಉದಾಹರಣೆಗೆ, ಪಶ್ಚಿಮ ಬಂಗಾಳದಲ್ಲಿ SIR ವೇಳೆ ತೆಗೆದುಹಾಕಲಾದ 27.16 ಲಕ್ಷ ಹೆಸರುಗಳ ಪೈಕಿ 22 ಲಕ್ಷಕ್ಕೂ ಹೆಚ್ಚು ಮಂದಿ ಮರುಸೇರ್ಪಡೆಗಾಗಿ ಮೇಲ್ಮನವಿ ಸಲ್ಲಿಸಿರುವುದಾಗಿ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯದ ವರದಿ
ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಮತದಾರರ ನೋಂದಣಿ, ಹೆಸರುಗಳ ಸೇರ್ಪಡೆ-ತೆಗೆದುಹಾಕುವಿಕೆ ಹಾಗೂ ಚುನಾವಣಾ ಪಟ್ಟಿಗಳ ನಿರ್ವಹಣೆಗೆ ಸಂಬಂಧಿಸಿದ ಕೆಲವು ನಿರ್ಧಾರಗಳ ಬಗ್ಗೆ ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬ ವರದಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ CJP, ಚುನಾವಣಾ ಆಯೋಗದ ನಿರ್ಧಾರ ಪ್ರಕ್ರಿಯೆ ಬಗ್ಗೆ ಸಾರ್ವಜನಿಕ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದೆ.
ಇದಕ್ಕೆ ಪ್ರತಿಯಾಗಿ ಚುನಾವಣಾ ಆಯೋಗದ ಮೂಲಗಳು, ಆಯೋಗದ ನಿರ್ಧಾರಗಳು ಮೂವರು ಚುನಾವಣಾ ಆಯುಕ್ತರ ಒಪ್ಪಿಗೆಯೊಂದಿಗೆ ನಡೆಯುತ್ತವೆ ಎಂದು ಹೇಳಿವೆ. ಅಧಿಕಾರಿಗಳ ನಡುವೆ ಅಭಿಪ್ರಾಯ ಭೇದಗಳು ಇರುವುದು ಸಂಸ್ಥೆಯ ನಿರ್ಧಾರಗಳ ಕಾನೂನುಬದ್ಧತೆಯನ್ನು ಪ್ರಶ್ನಿಸುವುದಿಲ್ಲ ಎಂಬ ನಿಲುವನ್ನೂ ಆಯೋಗದ ಮೂಲಗಳು ವ್ಯಕ್ತಪಡಿಸಿವೆ.
‘ಜಂತರ್ ಮಂತರ್ 2.0’ ಎಚ್ಚರಿಕೆ
ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡದಿದ್ದರೆ ದೆಹಲಿಯಲ್ಲಿ ‘ಜಂತರ್ ಮಂತರ್ 2.0’ ಮಾದರಿಯ ಪ್ರತಿಭಟನೆ ಸೇರಿದಂತೆ ರಾಷ್ಟ್ರವ್ಯಾಪಿ ಆಂದೋಲನ ನಡೆಸುವುದಾಗಿ CJP ಈಗಾಗಲೇ ಎಚ್ಚರಿಸಿತ್ತು. ಇದೀಗ ಅಕ್ಟೋಬರ್ 2, ಗಾಂಧಿ ಜಯಂತಿಯಿಂದ ಮುಂಬೈನಿಂದ ಪ್ರತಿಭಟನೆ ಆರಂಭಿಸಿ ದೇಶದ ವಿವಿಧ ನಗರಗಳಿಗೆ ವಿಸ್ತರಿಸುವುದಾಗಿ ದೀಪ್ಕೆ ತಿಳಿಸಿದ್ದಾರೆ.
ಮುಂದೇನು?
ಹೀಗಾಗಿ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುತ್ತಾರೆಯೇ, CJP ಘೋಷಿಸಿರುವ ಅಕ್ಟೋಬರ್ 2ರ ಪ್ರತಿಭಟನೆ ಆರಂಭವಾಗುತ್ತದೆಯೇ ಮತ್ತು SIR ಕುರಿತ ಆರೋಪಗಳಿಗೆ ಚುನಾವಣಾ ಆಯೋಗ ಮುಂದಿನ ದಿನಗಳಲ್ಲಿ ಯಾವ ಸ್ಪಷ್ಟನೆ ನೀಡಲಿದೆ ಎಂಬುದು ಈಗ ಗಮನ ಸೆಳೆದಿದೆ. ಇದೇ ವೇಳೆ ಕರಡು ಪಟ್ಟಿಗಳಲ್ಲಿನ ಇಳಿಕೆ ಮತ್ತು ಅಂತಿಮ ಮತದಾರರ ಪಟ್ಟಿಯಲ್ಲಿನ ಅಂಕಿಅಂಶಗಳನ್ನು ಪ್ರತ್ಯೇಕವಾಗಿ ಪರಿಗಣಿಸುವುದು ಅಗತ್ಯವಾಗಿದೆ.

