ಮಧ್ಯಪ್ರದೇಶದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಬೈಕ್ ಅಪಘಾತದಲ್ಲಿ ಗಾಯಗೊಂಡ ಸಂತ್ರಸ್ತರಿಗೆ ವೈದ್ಯೆಯೊಬ್ಬರು ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ ಎನ್ನಲಾದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಆದರೆ ಈ ವೀಡಿಯೊಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಆಸ್ಪತ್ರೆ ಆಡಳಿತ ಮಂಡಳಿ, ವೀಡಿಯೊದಲ್ಲಿ ಕಾಣಿಸುವ ಮುನ್ನವೇ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿತ್ತು ಎಂದು ತಿಳಿಸಿದೆ.
ಅಂಬಾಹ್ ಸಿವಿಲ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಬೈಕ್ ಅಪಘಾತದಲ್ಲಿ ಗಾಯಗೊಂಡ ಮೂವರು ರೋಗಿಗಳು ತಮ್ಮ ಕುಟುಂಬಸ್ಥರೊಂದಿಗೆ ಆಸ್ಪತ್ರೆಗೆ ಆಗಮಿಸಿದ್ದರು. ಈ ವೇಳೆ ಡಾ. ಆರತಿ ದಂಡೋತಿಯಾ ಅವರು ಕರ್ತವ್ಯದಲ್ಲಿದ್ದರು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ 16 ಸೆಕೆಂಡ್‌ಗಳ ವೀಡಿಯೊದಲ್ಲಿ, ರೋಗಿಗಳ ಜೊತೆಯಲ್ಲಿದ್ದವರು ಮತ್ತು ವೈದ್ಯೆಯ ನಡುವೆ ಮಾತಿನ ಚಕಮಕಿ ನಡೆಯುತ್ತಿರುವುದು ಹಾಗೂ ವೈದ್ಯೆ ಕುರ್ಚಿಯಿಂದ ಎದ್ದು ಮತ್ತೊಂದು ಕೊಠಡಿಗೆ ತೆರಳುವುದು ಕಂಡುಬರುತ್ತದೆ. ಇದನ್ನು ಆಧರಿಸಿ ವೈದ್ಯೆ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ ಎಂದು ಆರೋಪಿಸಿ ವೀಡಿಯೊ ಹಂಚಿಕೊಳ್ಳಲಾಗಿತ್ತು.
ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಅಂಬಾಹ್ ಬ್ಲಾಕ್ ಮೆಡಿಕಲ್ ಆಫೀಸರ್ (ಬಿಎಂಒ) ಪ್ರಮೋದ್ ಶರ್ಮಾ, ಗಾಯಾಳುಗಳು ಆಸ್ಪತ್ರೆಗೆ ಬಂದ ತಕ್ಷಣವೇ ಡಾ. ಆರತಿ ಅವರು ಸೂಕ್ತ ಚಿಕಿತ್ಸೆ ನೀಡಿದ್ದರು. ಆದರೆ ಕೆಲವು ಸೆಕೆಂಡುಗಳ ವೀಡಿಯೊ ತುಣುಕನ್ನು ಮಾತ್ರ ಬಳಸಿಕೊಂಡು ಸಂಪೂರ್ಣ ಘಟನೆಯನ್ನು ತಪ್ಪಾಗಿ ಬಿಂಬಿಸಲಾಗಿದೆ. ರೋಗಿಗಳ ಕಡೆಯವರು ವೈದ್ಯೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದರಿಂದ ಅವರು ಅಲ್ಲಿಂದ ತೆರಳಬೇಕಾಯಿತು ಎಂದು ವಿವರಣೆ ನೀಡಿದ್ದಾರೆ.
ಈ ವೀಡಿಯೊ ಅಂತರ್ಜಾಲದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನೆಟ್ಟಿಗರು ಎರಡು ಬಾಗಿನಲ್ಲಿ ವಿಭಾಗಗೊಂಡಿದ್ದಾರೆ. ಕೆಲವರು ವೈದ್ಯೆ ರೋಗಿಗಳ ಸಂಬಂಧಿಕರೊಂದಿಗೆ ಶಾಂತಿಯುತವಾಗಿ ವ್ಯವಹರಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದರೆ, ಇನ್ನು ಕೆಲವರು ವೈದ್ಯೆಯ ಸ್ವಯಂ ರಕ್ಷಣೆ ಮತ್ತು ಭದ್ರತೆಯ ದೃಷ್ಟಿಯಿಂದ ಅವರು ಕೈಗೊಂಡ ನಿರ್ಧಾರ ಸರಿಯಾಗಿದೆ ಎಂದು ಬೆಂಬಲವಾಗಿ ನಿಂತಿದ್ದಾರೆ.

