ಅಫ್ಘಾನಿಸ್ತಾನದ ತಾರಾ ಸ್ಪಿನ್ನರ್ ರಶೀದ್ ಖಾನ್ ಅವರನ್ನು ಯಾವುದೇ ಮುನ್ಸೂಚನೆ ನೀಡದೆ ಟಿ20 ತಂಡದ ನಾಯಕತ್ವದಿಂದ ವಜಾಗೊಳಿಸಲಾಗಿದೆ. ಬೋರ್ಡ್ ಹೊಸ ನಾಯಕನ ಹೆಸರನ್ನು ಪ್ರಕಟಿಸಿದಾಗಷ್ಟೇ ತಮಗೆ ಈ ವಿಷಯ ತಿಳಿದುಬಂತು ಎಂದು ರಶೀದ್ ಖಾನ್ ಸ್ವತಃ ಬಹಿರಂಗಪಡಿಸಿದ್ದಾರೆ.
2026ರ ಟಿ20 ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ತಂಡವು ಗ್ರೂಪ್ ಹಂತದಲ್ಲೇ ಹೊರಬಿದ್ದ ನಂತರ, ರಶೀದ್ ಖಾನ್ ಬದಲಿಗೆ ಆರಂಭಿಕ ಆಟಗಾರ ಇಬ್ರಾಹಿಂ ಜದ್ರಾನ್ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿತ್ತು. ಆದರೆ, ಭಾರತ ವಿರುದ್ಧದ ಇತ್ತೀಚಿನ ಟಿ20 ಸರಣಿಯಲ್ಲಿ ಜದ್ರಾನ್ ನೇತೃತ್ವದ ಅಫ್ಘಾನಿಸ್ತಾನ 0-3 ಅಂತರದಲ್ಲಿ ಸೋಲು ಅನುಭವಿಸಿದೆ.
ಈ ಕುರಿತು ಕ್ರಿಕ್‌ಇನ್ಫೋ ಜೊತೆ ಮಾತನಾಡಿರುವ ರಶೀದ್, “ಆ ಸಮಯದಲ್ಲಿ ನಿಜವಾಗಿ ಏನಾಯಿತು ಎಂಬುದು ನನಗೂ ತಿಳಿಯಲಿಲ್ಲ. ಕ್ರಿಕೆಟ್ ಮಂಡಳಿಯು ಹೊಸ ತಂಡವನ್ನು ಪ್ರಕಟಿಸಿದಾಗಲೇ ನಾನು ನಾಯಕತ್ವದಿಂದ ಹೊರಬಿದ್ದ ವಿಷಯ ನನಗೆ ಗೊತ್ತಾಗಿದ್ದು. ಆದರೆ, ಈಗ ನಾನು ಅದನ್ನು ಮರೆತು ಮುನ್ನಡೆದಿದ್ದೇನೆ. ನಾಯಕನಾಗಿರಲಿ ಇಲ್ಲದಿರಲಿ, ದೇಶವನ್ನು ಪ್ರತಿನಿಧಿಸುವುದು ನನಗೆ ಹೆಮ್ಮೆಯ ವಿಷಯ. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ತಂಡದ ಗೆಲುವಿಗೆ ಶ್ರಮಿಸುವುದಷ್ಟೇ ನನ್ನ ಕೈಯಲ್ಲಿದೆ” ಎಂದು ಹೇಳಿದ್ದಾರೆ.
ರಶೀದ್ ಖಾನ್ ನಾಯಕತ್ವದಲ್ಲಿ ಅಫ್ಘಾನಿಸ್ತಾನ ತಂಡವು 2024ರ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿ ಐತಿಹಾಸಿಕ ಸಾಧನೆ ಮಾಡಿತ್ತು. ರಶೀದ್ ನೇತೃತ್ವದಲ್ಲಿ ಆಡಿದ 48 ಟಿ20 ಪಂದ್ಯಗಳಲ್ಲಿ ಅಫ್ಘಾನಿಸ್ತಾನ 26 ಪಂದ್ಯಗಳನ್ನು ಗೆದ್ದುಕೊಂಡಿದೆ. ಇಷ್ಟಿದ್ದರೂ ಬೋರ್ಡ್ ತಮ್ಮನ್ನು ನಾಯಕತ್ವದಿಂದ ತೆಗೆದುಹಾಕಿದ ನಡೆ ರಶೀದ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.
ಭಾರತ ವಿರುದ್ಧದ ಸರಣಿಯ ಬಗ್ಗೆ ಮಾತನಾಡಿರುವ ರಶೀದ್, “ನಾವು ಭಾರತದ ವಿರುದ್ಧ ಸರಣಿ ಸೋತಿರಬಹುದು. ಆದರೆ ಪ್ರತಿಯೊಬ್ಬ ಆಟಗಾರನೂ ತಮ್ಮ ಮೇಲೆ ನಂಬಿಕೆ ಇಟ್ಟುಕೊಳ್ಳುವುದು ಅತ್ಯಗತ್ಯ. ಭಾರತವನ್ನು ಸೋಲಿಸಲು ಸಾಧ್ಯ ಎಂಬ ಮಾನಸಿಕ ಧೈರ್ಯ ಬೆಳೆಸಿಕೊಳ್ಳಬೇಕಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

