ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಚೌಡೇಶ್ವರಿ ಪೂಜೆ ಮಾಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ ಸುಮಾರು 40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿದ ನಕಲಿ ಜ್ಯೋತಿಷಿಯ ಪ್ರಕರಣ ಬೆಳಕಿಗೆ ಬಂದಿದೆ. ಪೂಜೆ ಹೆಸರಿನಲ್ಲಿ ಒಂದು ವರ್ಷದಿಂದ ಹಂತ ಹಂತವಾಗಿ ಚಿನ್ನಾಭರಣ ಪಡೆದುಕೊಂಡಿದ್ದ ಆರೋಪಿ, ಒಡವೆಗಳನ್ನು ವಾಪಸ್ ಕೇಳಿದಾಗ ತನಗೆ ಅಪಘಾತವಾಗಿದೆ ಎಂದು ಹೇಳಿ ನಾಪತ್ತೆಯಾಗಿದ್ದಾನೆ.
ಬ್ಯಾಟರಾಯನಪುರದ ನಿವಾಸಿ 62 ವರ್ಷದ ಶಾಂತಮ್ಮ ವಂಚನೆಗೊಳಗಾದ ಮಹಿಳೆ. ಈ ಸಂಬಂಧ ಅವರು ನೀಡಿದ ದೂರಿನ ಆಧಾರದ ಮೇಲೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಶಾಂತಮ್ಮ ಅನಾರೋಗ್ಯದ ಕಾರಣ ಆಸ್ಪತ್ರೆಗೆ ತೆರಳಿದ್ದರು. ಆಸ್ಪತ್ರೆಯಿಂದ ಮನೆಗೆ ಹಿಂದಿರುಗುವ ವೇಳೆ ಮಾರ್ಗಮಧ್ಯೆ ಜ್ಯೋತಿಷ್ಯ ಹೇಳುತ್ತಿದ್ದ ವೆಂಕಟೇಶ್ ಎಂಬಾತನ ಪರಿಚಯವಾಗಿದೆ.
ಶಾಂತಮ್ಮ ತಮ್ಮ ಆರೋಗ್ಯದ ಸಮಸ್ಯೆ ಬಗ್ಗೆ ಹೇಳಿದಾಗ, ಕೆಲವೇ ದಿನಗಳಲ್ಲಿ ಆರೋಗ್ಯ ಸುಧಾರಿಸಲಿದೆ ಎಂದು ವೆಂಕಟೇಶ್ ಹೇಳಿದ್ದಾನೆ. ಕಾಕತಾಳೀಯವಾಗಿ ನಂತರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರಿಂದ, ಶಾಂತಮ್ಮ ಅವರಿಗೆ ಆತನ ಮೇಲೆ ನಂಬಿಕೆ ಹೆಚ್ಚಾಗಿದೆ.
ಚೌಡೇಶ್ವರಿ ಪೂಜೆ ಹೆಸರಿನಲ್ಲಿ ನಂಬಿಕೆ
ನಂತರ ಶಾಂತಮ್ಮ ತಮ್ಮ ಮಗನಿಗೆ ಕುಡಿತದ ಚಟವಿದೆ ಎಂದು ಹೇಳಿ ಪರಿಹಾರ ಕೇಳಿದ್ದಾರೆ. ಇದನ್ನು ಬಳಸಿಕೊಂಡ ವೆಂಕಟೇಶ್, ಮನೆಯಲ್ಲಿ ಚೌಡೇಶ್ವರಿ ಪೂಜೆ ಮಾಡಬೇಕು ಎಂದು ನಂಬಿಸಿದ್ದಾನೆ.
ಮನೆಯಲ್ಲಿರುವ ಚಿನ್ನಾಭರಣಗಳನ್ನು ದೇವಿಯ ಮುಂದೆ ಇಟ್ಟು ಪೂಜೆ ಮಾಡಿದರೆ ಮಗನ ಕುಡಿತದ ಚಟ ದೂರವಾಗುತ್ತದೆ ಹಾಗೂ ಕುಟುಂಬದ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಹೇಳಿದ್ದಾನೆ. ಇದನ್ನು ನಂಬಿದ ಶಾಂತಮ್ಮ, ಕಳೆದ ಒಂದು ವರ್ಷದಲ್ಲಿ ಹಂತ ಹಂತವಾಗಿ ಚಿನ್ನಾಭರಣಗಳನ್ನು ಆತನಿಗೆ ನೀಡಿದ್ದಾರೆ.
ಆರೋಪಿ ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಯಂದು ಮನೆಗೆ ಬಂದು ಒಡವೆಗಳನ್ನು ಪಡೆದುಕೊಂಡು ಹೋಗುತ್ತಿದ್ದ ಎನ್ನಲಾಗಿದೆ. ಈ ರೀತಿ ಸುಮಾರು 40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಆತನ ಕೈ ಸೇರಿದೆ.
ಇತ್ತೀಚೆಗೆ ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಮನೆಯಲ್ಲಿನ ದೇವರ ವಿಗ್ರಹ ಅಲಂಕರಿಸಲು ಶಾಂತಮ್ಮ ಅವರಿಗೆ ತಮ್ಮ ಚಿನ್ನಾಭರಣಗಳ ಅಗತ್ಯವಿತ್ತು. ಹೀಗಾಗಿ ಒಡವೆಗಳನ್ನು ವಾಪಸ್ ನೀಡುವಂತೆ ವೆಂಕಟೇಶ್‌ಗೆ ಕೇಳಿದ್ದಾರೆ.
ಆದರೆ ಒಡವೆಗಳನ್ನು ಹಿಂದಿರುಗಿಸುವ ಬದಲು ವೆಂಕಟೇಶ್ ತನಗೆ ಭೀಕರ ಅಪಘಾತವಾಗಿದೆ ಎಂದು ಹೇಳಿದ್ದಾನೆ. ಇದನ್ನು ನಂಬಿಸಲು AI ಮೂಲಕ ಸಿದ್ಧಪಡಿಸಿದ ನಕಲಿ ಅಪಘಾತದ ವಿಡಿಯೋವೊಂದನ್ನು ಶಾಂತಮ್ಮ ಅವರ ಮೊಬೈಲ್‌ಗೆ ಕಳುಹಿಸಿದ್ದಾನೆ ಎನ್ನಲಾಗಿದೆ.
ಇದಲ್ಲದೆ, ಮತ್ತೊಬ್ಬ ವ್ಯಕ್ತಿಯಿಂದ ಕರೆ ಮಾಡಿಸಿ, “ಸ್ವಾಮೀಜಿಗೆ ಅಪಘಾತವಾಗಿದೆ” ಎಂದು ಹೇಳಿಸಿದ್ದಾನೆ. ಬಳಿಕ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾನೆ.
ಘಟನೆ ಬಳಿಕ ತಾವು ವಂಚನೆಗೊಳಗಾಗಿರುವುದು ಅರಿವಾದ ಶಾಂತಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಟರಾಯನಪುರ ಪೊಲೀಸರು ನಕಲಿ ಜ್ಯೋತಿಷಿ ವೆಂಕಟೇಶ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

