ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ತಮಾಷೆಯ ಸ್ವಭಾವದಿಂದ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ತಮ್ಮ ಸಹೋದರ ಸೊಹೈಲ್ ಖಾನ್ ಅವರ ನಿವಾಸದಲ್ಲಿ ನಡೆದ ಗಣಪತಿ ವಿಸರ್ಜನಾ ಕಾರ್ಯಕ್ರಮದಲ್ಲಿ ನಟ ವರುಣ್ ಶರ್ಮಾ ಅವರ ಕಾಲೆಳೆಯುವ ಮೂಲಕ ಕ್ರೀಡಾಂಗಣದಂತಿದ್ದ ವಾತಾವರಣದಲ್ಲಿ ನಗೆ ಅಲೆ ಎಬ್ಬಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮುಂಬೈನಲ್ಲಿ ನಡೆದ ಗಣೇಶ ವಿಸರ್ಜನೆ ವೇಳೆ ವರುಣ್ ಶರ್ಮಾ ಅವರು ಗಣಪತಿ ಬಪ್ಪನ ಮುಂದೆ ನಿಂತು ದೀರ್ಘವಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಈ ವೇಳೆ ಅವರ ಹಿಂದೆ ಸಾಲಿನಲ್ಲಿ ನಿಂತಿದ್ದ ಸಲ್ಮಾನ್ ಖಾನ್, ವರುಣ್ ಪೂಜೆ ಮುಗಿಸುವುದನ್ನೇ ಕಾಯುತ್ತಿದ್ದರು. ವರುಣ್ ಪ್ರಾರ್ಥನೆ ಮುಗಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದುದನ್ನು ಗಮನಿಸಿದ ಸಲ್ಮಾನ್, ಇನ್ನು ಎಷ್ಟು ವರ ಕೇಳ್ತೀಯಾ, ದೇವ್ರು ಅಷ್ಟೊಂದು ಕೊಡಲ್ಲ ಎಂದು ತಮಾಷೆಯಾಗಿ ಚೇಷ್ಟೆ ಮಾಡಿದ್ದಾರೆ. ಸಲ್ಮಾನ್ ಅವರ ಈ ಮಾತು ಕೇಳಿ ವರುಣ್ ಶರ್ಮಾ ಸೇರಿದಂತೆ ಅಲ್ಲಿದ್ದವರೆಲ್ಲರೂ ಜೋರಾಗಿ ನಕ್ಕಿದ್ದಾರೆ.
ಈ ಆಚರಣೆಯಲ್ಲಿ ಸಲ್ಮಾನ್ ಖಾನ್ ಕಪ್ಪು ಬಣ್ಣದ ಟಿ ಶರ್ಟ್, ಬೂದು ಬಣ್ಣದ ಜಾಕೆಟ್ ಹಾಗೂ ಟೋಪಿಯನ್ನು ಧರಿಸಿ ಅತ್ಯಂತ ಸರಳವಾಗಿ ಕಾಣಿಸಿಕೊಂಡಿದ್ದರು. ಸೊಹೈಲ್ ಖಾನ್ ಮತ್ತು ಅರ್ಹಾನ್ ಖಾನ್ ಡ್ಯಾನ್ಸ್ ಮಾಡುತ್ತಾ ಹಬ್ಬವನ್ನು ಸಂಭ್ರಮಿಸಿದ್ದು, ಸಲ್ಮಾನ್ ಖಾನ್ ಕೂಡ ಕುಟುಂಬಸ್ಥರ ಜೊತೆ ಸೇರಿ ಬಪ್ಪನಿಗೆ ವಿದಾಯ ಹೇಳಿದರು.
ಪ್ರಸ್ತುತ ಸಲ್ಮಾನ್ ಖಾನ್ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆಯಲ್ಲಿ ನಿರತರಾಗಿದ್ದು, ತಮ್ಮ ಮುಂಬರುವ ಚಿತ್ರಗಳಾದ ಮಾತೃಭೂಮಿ ಹಾಗೂ ಮಾನ್ಸ್ಟರ್ ಸಿನಿಮಾಗಳ ಚಿತ್ರೀಕರಣದಲ್ಲೂ ಬ್ಯುಸಿಯಾಗಿದ್ದಾರೆ.

