ಗಣೇಶ ಚತುರ್ಥಿಯ ಸಂದರ್ಭದಲ್ಲಿ ಮನೆಯಲ್ಲಿ ಪೂಜೆ ಮಾಡಲು ಸಾಧ್ಯವಾಗದ ವಿಮಾನ ಸಿಬ್ಬಂದಿಯೊಬ್ಬರಿಗೆ ಆಕಾಶದಲ್ಲಿಯೇ ಅನಿರೀಕ್ಷಿತವಾಗಿ ವಿಘ್ನನಿವಾರಕನ ದರ್ಶನ ಸಿಕ್ಕಿರುವ ಅಪರೂಪದ ಘಟನೆಯೊಂದು ನಡೆದಿದೆ.
ಏರ್ ಇಂಡಿಯಾ ಸಂಸ್ಥೆಯ ವಿಮಾನ ಪರಿಚಾರಕಿ ಅನುರಾಧಾ ಸೋನಿ ಎಂಬುವವರು ತಮ್ಮ ವಿಮಾನ ಸೇವೆಯ ವೇಳಾಪಟ್ಟಿ ದಿಢೀರ್ ಬದಲಾದ ಕಾರಣ, ಮನೆಯಲ್ಲಿ ಹಬ್ಬದ ಆಚರಣೆ ಮತ್ತು ಗಣಪತಿ ಪೂಜೆಯಲ್ಲಿ ಭಾಗವಹಿಸಲು ಸಾಧ್ಯವಾಗದೆ ತೀವ್ರ ಬೇಸರಗೊಂಡಿದ್ದರು. ಕರ್ತವ್ಯ ನಿಮಿತ್ತ ವಿಮಾನವೇರಿದ ಅವರಿಗೆ ಅಲ್ಲಿ ಅಚ್ಚರಿಯೊಂದು ಕಾಯುತ್ತಿತ್ತು.
ವಿಮಾನ ಪ್ರಯಾಣಿಸುತ್ತಿದ್ದಾಗ ಪ್ರಯಾಣಿಕರೊಬ್ಬರು ತಮ್ಮ ಜೊತೆಯಲ್ಲಿ ಸಣ್ಣ ಗಣಪತಿ ಮೂರ್ತಿಯನ್ನು ತಂದಿದ್ದರು. 35 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ವಿಮಾನದಲ್ಲೇ ಅನುರಾಧಾ ಅವರಿಗೆ ಶ್ರೀ ಗಣೇಶನಿಗೆ ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಲು ಅವಕಾಶ ಸಿಕ್ಕಿತು. ಈ ಭಾವನಾತ್ಮಕ ಕ್ಷಣದಿಂದ ರೋಮಾಂಚನಗೊಂಡ ಅವರು, ವಿಮಾನದಲ್ಲೇ ಮೂರ್ತಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು. ಸಹೋದ್ಯೋಗಿಗಳು ಕೂಡ ಈ ಸುಂದರ ಕ್ಷಣಕ್ಕೆ ಸಾಕ್ಷಿಯಾದರು.
ಈ ಕುರಿತು ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡಿರುವ ಅನುರಾಧಾ, ನಾನು ಎಲ್ಲೇ ಇದ್ದರೂ ಬಪ್ಪ ನನ್ನ ಜೊತೆಗಿದ್ದಾನೆ ಎಂಬುದನ್ನು ಈ ಘಟನೆ ತೋರಿಸಿಕೊಟ್ಟಿದೆ ಎಂದು ಬರೆದುಕೊಂಡಿದ್ದಾರೆ. ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತ ವೈರಲ್ ಆಗುತ್ತಿದ್ದು, ಲಕ್ಷಾಂತರ ಜನರು ವೀಕ್ಷಿಸಿ ಏರ್ ಇಂಡಿಯಾ ಸಿಬ್ಬಂದಿಯ ಭಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

