HomeKarnatakaವಂದೇ ಮಾತರಂ' ಗೀತೆ ಎರಡು ಚರಣ ಹಾಡಿದ್ದಕ್ಕೆ ಕಾರ್ಯಕ್ರಮದಿಂದ ಹೊರ ನಡೆದ ಶಾಸಕ ಚನ್ನಬಸಪ್ಪ

ವಂದೇ ಮಾತರಂ’ ಗೀತೆ ಎರಡು ಚರಣ ಹಾಡಿದ್ದಕ್ಕೆ ಕಾರ್ಯಕ್ರಮದಿಂದ ಹೊರ ನಡೆದ ಶಾಸಕ ಚನ್ನಬಸಪ್ಪ

ಶಿವಮೊಗ್ಗ: ಶಿವಮೊಗ್ಗದಲ್ಲಿ ನಡೆದ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆಯನ್ನು ಆರು ಚರಣದ ಬದಲು ಕೇವಲ ಎರಡು ಚರಣ ಹಾಡಿದ್ದಕ್ಕೆ ಶಾಸಕ ಎಸ್.ಎನ್. ಚನ್ನಬಸಪ್ಪ ಕಾರ್ಯಕ್ರಮ ಬಹಿಷ್ಕರಿಸಿ ಹೊರನಡೆದಿದ್ದಾರೆ.

ವಂದೇ ಮಾತರಂ ಎರಡು ಚರಣಗಳಿಗೆ ಸೀಮಿತ ವಿರುದ್ಧ ಬಿಜೆಪಿ ಜನಾಂದೋಲನ

ವಂದೇ ಮಾತರಂ‌ ಗೀತೆಯನ್ನು ಕೇವಲ ಎರಡು ಚರಣಗಳಿಗೆ ಸೀಮಿತಗೊಳಿಸಿ ರಾಜ್ಯದ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದರ ಜತೆಗೆ ಸರ್ಕಾರದ ನಡೆಯ ವಿರುದ್ಧ ಬಿಜೆಪಿ ಜನಾಂದೋಲನ‌ ರೂಪಿಸಲಿದೆ ಎಂದು‌ ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬುಧವಾರ ಜಿಲ್ಲಾಡಳಿತ ಆಯೋಜಿಸಿದ್ದ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ವಂದೇ ಮಾತರಂ ಗೀತೆಯನ್ನು ಕೇವಲ ಎರಡು ಚರಣಗಳಿಗೆ ಸಿಮೀತಗೊಳಿಸಿದ್ದನ್ನು‌ ವಿರೋಧಿಸಿ ಸಭೆ ಬಹಿಷ್ಕರಿಸಿ‌ ಹೊರ‌ಬಂದ ನಂತರ ಅವರು ತಮ್ಮ ಕಚೇರಿಯಲ್ಲಿ  ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಹಾಗೂ ಸಂವಿಧಾನದ ಆಶಯಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನಡೆಯಬೇಕಾದ ಪ್ರಜಾಪ್ರಭುತ್ವ ದಿನಾಚರಣೆಯ ಕಾರ್ಯಕ್ರಮದಲ್ಲೇ ಕಾನೂನು ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧವಾದ ನಡೆ ನಡೆದಿದೆ. ಇದನ್ನು‌ತಾವು ಉಗ್ರವಾಗಿ ಖಂಡಿಸುವುದಾಗಿ ತಿಳಿಸಿದರು.

ವಂದೇಮಾತರಂ ಗೀತೆಗೆ 150 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಉಲ್ಲೇಖಿಸಿದ ಅವರು, ಈ ಸಂಬಂಧದ ಕಾನೂನು ಹಾಗೂ ನಿರ್ದೇಶನಗಳನ್ನು ಎಲ್ಲರೂ ಗೌರವಿಸಬೇಕು. ರಾಷ್ಟ್ರಪತಿಗಳೂ ಇದಕ್ಕೆ ಅಂಕಿತ ಹಾಕಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ತನ್ನದೇ ಆದ ರೀತಿಯಲ್ಲಿ ವಿಭಿನ್ನ ನಿಲುವು ತೆಗೆದುಕೊಳ್ಳುವುದು ಸರಿಯಲ್ಲ.‌ ಅಧಿಕಾರ ಇದೆ ಎಂದ ಮಾತ್ರ ಏನ್ ಬೇಕಾದ್ರೂ ಮಾಡಬಹುದೇ ಎಂದು ಕಿಡಿಕಾರಿದರು.

ಪ್ರಜಾಪ್ರಭುತ್ವ ಉಳಿಸಿ ಕಾರ್ಯಕ್ರಮದಲ್ಲಿ ನ್ಯಾಯಾಧೀಶರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದ ಸಂದರ್ಭದಲ್ಲೇ ವಂದೇಮಾತರಂ ಗೀತೆಯ ಎರಡು ಚರಣಗಳನ್ನು ಮಾತ್ರ ಹಾಡಲಾಗಿದೆ. ಈ ಕುರಿತು ಪ್ರಶ್ನಿಸಿದಾಗ, “ಸರ್ಕಾರದ ಆದೇಶವೇ ಹೀಗಿದೆ” ಎಂಬ ಉತ್ತರ ನೀಡಲಾಗಿದೆ. ಹಾಗಾದರೆ ಕಾನೂನನ್ನು ಯಾರು ಪಾಲಿಸಬೇಕು? ಕಾನೂನಿನ ರಕ್ಷಣೆ ಮತ್ತು ಗೌರವವನ್ನು ಯಾರು ಮಾಡಬೇಕು?  “ಈ ದೇಶಕ್ಕೊಂದು ಕಾನೂನು, ರಾಜ್ಯಕ್ಕೊಂದು ಕಾನೂನು ಎನ್ನುವ ವ್ಯವಸ್ಥೆ ಪ್ರಜಾಪ್ರಭುತ್ವದಲ್ಲಿ ಸಾಧ್ಯವೇ?” ಎಂದು ಪ್ರಶ್ನಿಸಿದರು.

ಸಂವಿಧಾನದ ಅಡಿಯಲ್ಲಿ ನಡೆಯುವ ಸರ್ಕಾರವೇ ಕಾನೂನಿನ ಪಾಲನೆಯಲ್ಲಿ ದ್ವಂದ್ವ ನೀತಿ ಅನುಸರಿಸಬಾರದು. ಸರ್ಕಾರದ ಪ್ರಸ್ತಾವನೆ, ಕ್ಯಾಬಿನೆಟ್ ನಿರ್ಧಾರ ಹಾಗೂ ಪಕ್ಷದ ರಾಜಕೀಯ ನಿಲುವುಗಳನ್ನು ಸರ್ಕಾರಿ ಕಾರ್ಯಕ್ರಮಗಳೊಂದಿಗೆ ಬೆರೆಸಬಾರದು. ಪ್ರಜಾಪ್ರಭುತ್ವ ಉಳಿಸುವ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಯಾವುದೇ ಪಕ್ಷದ ನೀತಿ-ನಿಯಮಗಳಿಗೆ ಅವಕಾಶ ನೀಡಬಾರದು ‌ಎಂದು ಗುಡುಗಿದರು.

ವಂದೇಮಾತರಂ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೇಶದ ಜನರಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸಿದ ಗೀತೆಯಾಗಿದ್ದು, 150 ವರ್ಷ ಪೂರ್ಣಗೊಂಡಿರುವ ಸಂದರ್ಭದಲ್ಲಿ ಅದಕ್ಕೆ ಗೌರವ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ‌ಆದರೆ ರಾಜ್ಯ ಸರ್ಕಾರದ ನಡೆ ಕಾನೂನಿನ ಮೇಲಿನ ಗೌರವಕ್ಕೆ ಧಕ್ಕೆ ತರುವಂತಿದೆ ಎಂದು ದೂರಿದರು.

ರಾಜಕಾರಣಕ್ಕಾಗಿ ನಾನು ಈ ವಿಚಾರವನ್ನು ಬಳಸುತ್ತಿಲ್ಲ. ಸಂವಿಧಾನ, ಕಾನೂನು ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಮಾತನಾಡುತ್ತಿದ್ದೇನೆ. ವಾಸ್ತವಿಕತೆಗೆ ಹತ್ತಿರವಾಗಿ ಮಾತನಾಡುತ್ತಿದ್ದೇನೆ. ಇಲ್ಲಿ ಯಾರೂ ಕೈಕಟ್ಟಿ ಕುಳಿತಿಲ್ಲ. ಸಂವಿಧಾನಕ್ಕೆ ಅಪಚಾರವಾಗುವ ಯಾವುದೇ ನಡೆಗೆ ವಿರೋಧ ವ್ಯಕ್ತಪಡಿಸುವ ಜವಾಬ್ದಾರಿ ಚುನಾಯಿತ ಪ್ರತಿನಿಧಿಗಳಿಗೆ ಇದೆ ಎಂದು ಹೇಳಿದರು.

ಸರ್ಕಾರವು ವಿವಿಧ ಸಂದರ್ಭಗಳಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳಿಗೆ ಗೌರವ ಸಲ್ಲಿಸುವುದನ್ನು ಪ್ರಶ್ನಿಸುತ್ತಿಲ್ಲ. ಆದರೆ ಅದೇ ಸರ್ಕಾರ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ದ್ವಂದ್ವ ನಿಲುವು ತಾಳಬಾರದು ಎಂದು ಅವರು ಹೇಳಿದರು.

ಚಾಮುಂಡೇಶ್ವರಿ ಸೇರಿದಂತೆ ವಿವಿಧ ದೇವತೆಗಳ ಆರಾಧನೆ, ಸಾಂಸ್ಕೃತಿಕ ಆಚರಣೆಗಳಿಗೆ ಗೌರವ ನೀಡುವ ಸರ್ಕಾರಕ್ಕೆ ವಂದೇಮಾತರಂನಂತಹ ರಾಷ್ಟ್ರೀಯ ಭಾವನೆಯೊಂದಿಗೆ ಬೆಸೆದುಕೊಂಡಿರುವ ಗೀತೆಗೆ ಗೌರವ ಸಲ್ಲಿಸುವ ವಿಚಾರದಲ್ಲಿ ಹಿಂಜರಿಕೆ ಏಕೆ ಎಂದು ಪ್ರಶ್ನಿಸಿದ ಅವರು, “ಪ್ರಜಾಪ್ರಭುತ್ವವನ್ನು ಉಳಿಸಿ, ಸಂವಿಧಾನವನ್ನು ಗೌರವಿಸಿ ಎಂದು ಹೇಳುವ ದಿನವೇ ಸಂವಿಧಾನದ ಆಶಯಗಳಿಗೆ ವಿರುದ್ಧವಾದ ನಡೆ ನಡೆಯಬಾರದು. ಸರ್ಕಾರ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಗುಡುಗಿದರು.

ಈ ವಿಚಾರವನ್ನು ಮುಂಬರುವ ವಿಧಾನಮಂಡಲ ಅಧಿವೇಶನದಲ್ಲೂ ಪ್ರಸ್ತಾಪಿಸಿ, ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಲಾಗುವುದು. ಅಗತ್ಯವಿದ್ದಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು. ಬೀದಿ ಹೋರಾಟದ ಜತೆಗೆ ಕಾನೂನು‌ ಹೋರಾಟಕ್ಕೂ ಮುಂದಾಗುವುದಾಗಿ ಅವರು ತಿಳಿಸಿದರು.

ಗೋಷ್ಠಿಯಲ್ಲಿ ಬಿಜೆಪಿ‌ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ನಗರಾಧ್ಯಕ್ಷ ಮೋಹನ್ ರೆಡ್ಡಿ, ಪ್ರಮುಖರಾದ ದೀನ ದಯಾಳ್, ಮಂಜುನಾಥ್ ನವುಲೆ, ಸುರೇಖಾ ಮುರುಳಿಧರ್, ಯಶೋದಾ, ಪ್ರಭಾಕರ್, ಕುಮಾರ್, ಪರಮೇಶ್ವರ್ ನಾಯ್ಕ್, ಶ್ರೀನಾಗ್ ಇದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular