ಬಾಲಿವುಡ್‌ನ ಹಿರಿಯ ಹಾಗೂ ಖ್ಯಾತ ನಟಿ ನೀನಾ ಗುಪ್ತಾ ಅವರು ತಮ್ಮ ಜೀವನದ ಅತ್ಯಂತ ಸವಾಲಿನ ಹಂತವಾಗಿದ್ದ ‘ಒಂಟಿ ತಾಯ್ತನ’ (Single Motherhood) ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ತಮ್ಮ ಮಗಳು ಮಸಾಬಾ ಗುಪ್ತಾ ಅವರನ್ನು ಏಕಾಂಗಿಯಾಗಿ ಬೆಳೆಸಿದ ದಿನಗಳನ್ನು ನೆನಪಿಸಿಕೊಂಡಿರುವ ಅವರು, ಸಂಪೂರ್ಣ ಸಿದ್ಧತೆ ಮತ್ತು ಇಷ್ಟವಿಲ್ಲದೆ ಯಾರೂ ಈ ಹಾದಿಯನ್ನು ಆಯ್ಕೆ ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಬಾಲ್ಯದಲ್ಲಿ ತಂದೆಯ ಪ್ರೀತಿ ಮತ್ತು ಸಾಮೀಪ್ಯ ಸಿಗದಂತೆ ಮಾಡಿದ್ದಕ್ಕಾಗಿ ತಾವು ಮಗಳು ಮಸಾಬಾಗೆ ಹಲವು ಬಾರಿ ಕ್ಷಮೆಯಾಚಿಸಿರುವುದಾಗಿ ತಿಳಿಸಿದ್ದಾರೆ.
ಝೂಮ್ (Zoom) ಮಾಧ್ಯಮಕ್ಕೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ ನೀನಾ ಗುಪ್ತಾ, ೧೯೮೦ರ ದಶಕದ ಅಂತ್ಯದಲ್ಲಿ ವೆಸ್ಟ್ ಇಂಡೀಸ್‌ನ ಕ್ರಿಕೆಟ್ ದಿಗ್ಗಜ ವಿವಿಯನ್ ರಿಚರ್ಡ್ಸ್ ಅವರೊಂದಿಗಿನ ಸಂಬಂಧದಿಂದ ಮಸಾಬಾ ಜನಿಸಿದರು ಎಂದು ನೆನಪಿಸಿಕೊಂಡರು. ಆ ಸಮಯದಲ್ಲಿ ವಿವಿಯನ್ ರಿಚರ್ಡ್ಸ್ ಅದಾಗಲೇ ವಿವಾಹಿತರಾಗಿದ್ದರಿಂದ, ನೀನಾ ಗುಪ್ತಾ ಮಗಳನ್ನು ಭಾರತದಲ್ಲೇ ಏಕಾಂಗಿಯಾಗಿ ಬೆಳೆಸುವ ನಿರ್ಧಾರ ಕೈಗೊಂಡಿದ್ದರು.
ಒಂಟಿ ತಾಯ್ತನವನ್ನು ಏಕೆ ಪ್ರೋತ್ಸಾಹಿಸುವುದಿಲ್ಲ ಎಂಬುದಕ್ಕೆ ವಿವರಣೆ ನೀಡಿದ ನಟಿ, “ಸಮಾಜ ಏನು ಅನ್ನುತ್ತದೆ ಎಂಬ ಭಯದಿಂದ ನಾನು ಹೀಗೆ ಹೇಳುತ್ತಿಲ್ಲ, ಬದಲಿಗೆ ಮಗುವನ್ನು ಏಕಾಂಗಿಯಾಗಿ ಬೆಳೆಸುವಾಗ ಎದುರಾಗುವ ಪ್ರಾಯೋಗಿಕ ಹಾಗೂ ಭಾವುಕ ಸವಾಲುಗಳು ಅತ್ಯಂತ ಕಠಿಣವಾಗಿರುತ್ತವೆ. ನಾನು ಮಾಡಿದೆ ಎಂಬ ಒಂದೇ ಕಾರಣಕ್ಕೆ ಬೇರೆಯವರು ಇದನ್ನು ಅನುಕರಿಸಬೇಡಿ. ಒಬ್ಬಂಟಿಯಾಗಿ ಮಗುವನ್ನು ಸಾಕುವುದು ದೈಹಿಕವಾಗಿ, ಮಾನಸಿಕವಾಗಿ ಮತ್ತು ಆರ್ಥಿಕವಾಗಿ ತೀವ್ರ ಶ್ರಮದಾಯಕವಾಗಿದ್ದು, ಇದು ಮಗುವಿನ ಹಿತದೃಷ್ಟಿಯಿಂದಲೂ ಸೂಕ್ತವಲ್ಲ. ಹಾಗಾಗಿ ಸ್ವಂತ ಇಷ್ಟವಿಲ್ಲದ ಹೊರತು ಯಾರೂ ಈ ಹಾದಿ ತುಳಿಯುವುದು ಬೇಡ” ಎಂದಿದ್ದಾರೆ.
ಮುಂದುವರಿದು ಮಾತನಾಡಿದ ಅವರು, “ನನ್ನ ಮಗಳು ಬೆಳೆಯುವಾಗ ಆಕೆಗೆ ತಂದೆಯ ಆಸರೆ ಸಿಗಲಿಲ್ಲ ಎಂಬುದಕ್ಕೆ ನಾನು ಆಕೆಯ ಬಳಿ ಹಲವು ಬಾರಿ ‘ಸಾರಿ’ ಕೇಳಿದ್ದೇನೆ. ಅದು ನನ್ನ ತಪ್ಪಾಗಿತ್ತು, ಆದರೆ ಮಸಾಬಾ ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದಾಳೆ. ನಾವು ಚಿಕ್ಕ ವಯಸ್ಸಿನಲ್ಲಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ, ಆದರೆ ಅದರ ಪರಿಣಾಮಗಳು ಆನಂತರವಷ್ಟೇ ನಮಗೆ ತಿಳಿಯುತ್ತವೆ” ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

