ನಾಳೆ ( ಆಗಸ್ಟ್ 26 ) ಭಾರತದ ಸಿನಿ ರಸಿಕರು ಹಲವು ತಿಂಗಳುಗಳಿಂದ ಕಾಯುತ್ತಿದ್ದ ದಿನ ಆಗಮನವಾಗಲಿದೆ. ಪ್ಯಾನ್ ಇಂಡಿಯಾ ಸ್ಟಾರ್ ಯಶ್ ನಟನೆಯ ಬಹು ನಿರೀಕ್ಷಿತ ಚಿತ್ರ ಟಾಕ್ಸಿಕ್ ಬಿಡುಗಡೆಯಾಗಲಿದೆ.
ಮೂರ್ನಾಲ್ಕು ಬಾರಿ ಬಿಡುಗಡೆಯ ದಿನವನ್ನು ಮುಂದೂಡಿದ್ದ ಚಿತ್ರತಂಡ ಕೊನೆಗೂ ನಾಳೆ ತಮ್ಮ ದೊಡ್ಡ ಕೆಲಸವನ್ನು ತೆರೆ ಮೇಲೆ ಪ್ರದರ್ಶಿಸುತ್ತಿದ್ದು, ಟಾಕ್ಸಿಕ್ ಎಂಬ ಮಹಾ ಸಿನಿಮಾ ಹೇಗಿರಲಿದೆ ಎಂಬುದನ್ನು ತಿಳಿಯಲು ಸಿನಿ ರಸಿಕರ ದಂಡೇ ಸಜ್ಜಾಗಿದೆ.
ಕೆಜಿಎಫ್ ಚಿತ್ರ ಸರಣಿಯ ಮಹಾ ಯಶಸ್ಸಿನ ಬಳಿಕ ಯಶ್ ನಟಿಸುತ್ತಿರುವ ಚಿತ್ರ ಇದಾಗಿದ್ದು, ಕೆಜಿಎಫ್ ಎರಡನೇ ಭಾಗದ ರೀತಿಯೇ ಈ ಚಿತ್ರಕ್ಕೂ ಸಹ ಕನ್ನಡ ಮಾತ್ರವಲ್ಲದೇ ಪ್ಯಾನ್ ಇಂಡಿಯಾ ಮಾರ್ಕೆಟ್‌ನಲ್ಲಿ ಬಹು ದೊಡ್ಡ ಬೇಡಿಕೆ ಹುಟ್ಟಿಕೊಂಡಿದೆ.
ಇನ್ನು ಚಿತ್ರದ ಬುಕಿಂಗ್ ಐದಾರು ದಿನಗಳ ಹಿಂದೆಯೇ ತೆರಯಲ್ಪಟ್ಟಿದ್ದು, ತೆಲುಗು ಬುಕಿಂಗ್ ಇಂದಿನಿಂದ ಆರಂಭವಾಗಿದೆ. ಹೀಗೆ ಟಾಕ್ಸಿಕ್ ಚಿತ್ರದ ತೆಲುಗು ಮುಂಗಡ ಬುಕಿಂಗ್ ತೆರೆಯಲ್ಪಡುತ್ತಿದ್ದಂತೆ ತೆಲುಗು ಮಂದಿ ಸಾಮಾಜಿಕ ಜಾಲತಾಣಲದಲ್ಲಿ ಸೇವ್ ಇರುಮುಡಿ ( #saveirumudi ) ಎಂಬ ಹ್ಯಾಷ್‌ಟ್ಯಾಗ್ ಬಳಸಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಹೌದು, ರವಿತೇಜಾ ನಟನೆಯ ಇರುಮುಡಿ ಚಿತ್ರ ಕಳೆದ ವಾರವಷ್ಟೇ ಬಿಡುಗಡೆಯಾಗಿ ತೆಲುಗು ಬಾಕ್ಸ್ಆಫೀಸ್‌ನಲ್ಲಿ ಅಬ್ಬರಿಸುತ್ತಿರುವ ಚಿತ್ರ. ಇತ್ತೀಚೆಗೆ ಬಿಡುಗಡೆಯಾದ ಎಲ್ಲ ತೆಲುಗು ಚಿತ್ರಗಳಿಗಿಂತ ಹೆಚ್ಚಿನ ಟಿಕೆಟ್ ಮಾರಾಟಗೊಳ್ಳುವ ಮೂಲಕ ದಾಖಲೆಯ ಪ್ರದರ್ಶನವನ್ನು ಚಿತ್ರ ಕಾಣುತ್ತಿದ್ದು, ಇದೀಗ ನಾಳೆ ಟಾಕ್ಸಿಕ್ ಬಿಡುಗಡೆಯಾಗುತ್ತಿರುವುದರಿಂದ ಈ ಚಿತ್ರದ ಮೇಲೆ ಪ್ರಭಾವ ಬೀರಲಿದೆ ಎಂದು ಆತಂಕ ಹೊರಹಾಕಿದ್ದಾರೆ.
ಇಷ್ಟು ದಿನಗಳ ಕಾಲ ಇರುಮುಡಿ ಪ್ರದರ್ಶನಗೊಳ್ಳುತ್ತಿದ್ದ ಹಲವಾರು ಚಿತ್ರಮಂದಿರಗಳಲ್ಲಿ ನಾಳೆ ಟಾಕ್ಸಿಕ್ ಬಿಡುಗಡೆಯಾಗುತ್ತಿದ್ದು ತೆಲುಗು ಚಿತ್ರಕ್ಕೆ ಅನ್ಯಾಯವಾಗುತ್ತಿದೆ, ಟಾಕ್ಸಿಕ್‌ನಿಂದ ಇರುಮುಡಿಯನ್ನು ಕಾಪಾಡಿ ಎಂದು ಬರೆದುಕೊಳ್ಳುತ್ತಿದ್ದಾರೆ. ಇನ್ನು ಟಾಕ್ಸಿಕ್ ಚಿತ್ರವನ್ನು ತೆಲುಗಿನಲ್ಲಿ ನಿರ್ಮಾಪಕ ದಿಲ್ ರಾಜು ಹಂಚಿಕೆ ಮಾಡಿ ಬಿಡುಗಡೆ ಮಾಡುತ್ತಿದ್ದು, ದಿಲ್ ರಾಜು ಮಾಫಿಯಾ ಎಂದೂ ಸಹ ಟೀಕೆಗಳನ್ನು ಮಾಡಿ ಖಂಡಿಸಲಾಗುತ್ತಿದೆ.

