HomeKarnatakaನಿಷೇಧಿತ ಸ್ಥಳದಲ್ಲಿ ಪ್ರತಿಭಟಿಸಿದ ಸಿಎಂ, ಸಚಿವರ ವಿರುದ್ಧ FIR ದಾಖಲಿಸಿ ; ಆರ್.ಅಶೋಕ್ ಆಗ್ರಹ

ನಿಷೇಧಿತ ಸ್ಥಳದಲ್ಲಿ ಪ್ರತಿಭಟಿಸಿದ ಸಿಎಂ, ಸಚಿವರ ವಿರುದ್ಧ FIR ದಾಖಲಿಸಿ ; ಆರ್.ಅಶೋಕ್ ಆಗ್ರಹ

ಬೆಂಗಳೂರು : ಕಾಂಗ್ರೆಸ್‌ ನಾಯಕರು ಚುನಾವಣಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ಮಾಡಿದ್ದನ್ನು ಖಂಡಿಸಿದ ಪ್ರತಿಪಕ್ಷ ನಾಯಕ ಆರ್‌.ಅಶೋಕ ಹಾಗೂ ಬಿಜೆಪಿ ಮುಖಂಡರು ಪೊಲೀಸ್‌ ಆಯುಕ್ತರನ್ನು ಭೇಟಿ ಮಾಡಿ ಕಾಂಗ್ರೆಸ್‌ ನಾಯಕರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಮನವಿ ಸಲ್ಲಿಸಿದ್ದಾರೆ.

ಮನವಿ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಪಕ್ಷ ನಾಯಕ ಆರ್‌.ಅಶೋಕ, ಬೆಂಗಳೂರು ಪೊಲೀಸ್‌ ಆಯುಕ್ತರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ರಾಜ್ಯದಲ್ಲಿ ಬರಗಾಲ ಬಂದಿದೆ, ಕುಡಿಯುವ ನೀರಿನ ಸಮಸ್ಯೆ ಇದೆ. ರೈತರ ಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಸಚಿವ ಸಂಪುಟ ಸಭೆ ನಡೆಯಬೇಕಿತ್ತು. ಆದರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಸಚಿವರು ಬಾಂಗ್ಲಾ ಹಾಗೂ ಪಾಕಿಸ್ತಾನಿಗಳ ಮತಗಳನ್ನು ಉಳಿಸಿಕೊಳ್ಳಲು ಸಂಪುಟ ಸಭೆಯನ್ನು ರದ್ದುಗೊಳಿಸಿ ಚುನಾವಣಾ ಆಯೋಗಕ್ಕೆ ಓಡಿ ಬಂದಿದ್ದರು. ನಂತರ ಆಚೆ ಬಂದು ಎಕ್ಸ್‌ನಲ್ಲಿ ಧರಣಿ ಮಾಡುತ್ತೇವೆಂದು ಘೋಷಣೆ ಮಾಡಿದ್ದರು. ಯಾವ ಕಾನೂನಿನಡಿ ಇಂತಹ ಧರಣಿ ಮಾಡಲಾಗಿದೆ? ಆ ರಸ್ತೆಯಲ್ಲಿ ಯಾವುದೇ ಧರಣಿ ಮಾಡುವಂತಿಲ್ಲ ಎಂದು ಹೈಕೋರ್ಟ್‌ ಆದೇಶವಿದೆ. ಮುಖ್ಯ ನ್ಯಾಯಮೂರ್ತಿಗಳ ಮನೆ ಅಲ್ಲೇ ಇದೆ. ಕಾನೂನು ಪಾಲಿಸಬೇಕಾದ ಮುಖ್ಯಮಂತ್ರಿಯೇ ಯಾವುದೇ ಭಯವಿಲ್ಲದೆ ಕಾನೂನು ಉಲ್ಲಂಘಿಸಿದ್ದಾರೆ. ಇವರೇ ಕಾನೂನು ಉಲ್ಲಂಘಿಸಿದರೆ ಬೇರೆಯವರಿಗೆ ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಪ್ರತಿಭಟನೆಗೆ ಅವಕಾಶ ನೀಡಲಾಗುವುದಿಲ್ಲ ಎಂದರು.

ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಕೂಡ ಅಲ್ಲೇ ಇದ್ದರು. ಇವರೇ ಅಲ್ಲಿ ಪ್ರತಿಭಟನೆ ಮಾಡಿದರೆ ಯಾರು ಬೇಕಾದರೂ ಎಲ್ಲಿಯಾದರೂ ಪ್ರತಿಭಟನೆ ಮಾಡಬಹುದು. ಇವರೇನೂ ವಿಶೇಷ ವ್ಯಕ್ತಿಗಳಲ್ಲ. ಇವರು ಕೂಡ ಕಾನೂನು ಪಾಲಿಸಬೇಕು. ಇದು ಗೂಂಡಾ ಸರ್ಕಾರವಾಗಿದ್ದು, ಆ ದಿನಗಳ ಆಡಳಿತ ನಡೆಸುತ್ತಿದೆ. ಸಂವಿಧಾನಕ್ಕೆ ಅಪಚಾರವೆಸಗಿದ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್‌ ಆಯುಕ್ತರಿಗೆ ಆಗ್ರಹಿಸಲಾಗಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಂದು ಎಫ್‌ಐಆರ್‌ ಅನ್ನು ಪೊಲೀಸರು ದಾಖಲಿಸಿದ್ದಾರೆ. ಕೋರ್ಟ್‌ ಆದೇಶದ ಪ್ರಕಾರ ರಸ್ತೆ ಬದಿಯಲ್ಲಿದ್ದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಸಿಎಂ ಹಾಗೂ ಸಚಿವರು ಕೂಡ ಇಲ್ಲಿ ಧರಣಿ ಮಾಡಿದ್ದಾರೆ. ಇದು ಕಾನೂನು ಕೈಗೆ ತೆಗೆದುಕೊಂಡ ಘಟನೆಯಾಗಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದರೆಂಬ ಕಾರಣಕ್ಕೆ ಇವರು ಚುನಾವಣಾ ಆಯೋಗದ ಮುಂಭಾಗ ನಾಟಕ ಮಾಡಿದ್ದಾರೆ. ಸಾಮಾನ್ಯ ಜನರು ಇದನ್ನೇ ಮಾಡಿದರೆ ಪೊಲೀಸರು ಸುಮ್ಮನೆ ಬಿಡುವುದಿಲ್ಲ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್‌ ಆಯುಕ್ತರು ಹೇಳಿದ್ದಾರೆ ಎಂದರು.

ಫಾರ್ಮ್ 7 ಸಂಬಂಧಿತ ವಿವಾದ

*ಫಾರ್ಮ್‌ 7 ಕಾನೂನುಬದ್ಧ*

ಯಾರು ಬೇಕಾದರೂ ಫಾರ್ಮ್‌ 7 ಸಲ್ಲಿಸಬಹುದು. ಆದರೆ ಕಾಂಗ್ರೆಸ್‌ ನಾಯಕರು ಇದನ್ನೇ ತಪ್ಪು ಎಂದಿದ್ದಾರೆ. ಚುನಾವಣಾ ಆಯೋಗ ಎಷ್ಟು ಫಾರ್ಮ್‌ 7 ಸಲ್ಲಿಕೆಯಾಗಿದೆ ಎಂದು ತಿಳಿಸಲಿ. ಇಲ್ಲಿ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು. ಅದರ ಬಗ್ಗೆ ಚುನಾವಣಾ ಆಯೋಗ ತೀರ್ಮಾನ ಕೈಗೊಳ್ಳುತ್ತದೆ. ಅದರಲ್ಲಿ ತಪ್ಪಿದ್ದರೆ ಕಾಂಗ್ರೆಸ್‌ನವರು ಕೋರ್ಟ್‌ ಮೊರೆ ಹೋಗಬಹುದೇ ಹೊರತು, ಚುನಾವಣಾಧಿಕಾರಿಗಳ ಮೇಲೆ ಒತ್ತಡ ಹೇರುವಂತಿಲ್ಲ. ಆದಾಯ ತೆರಿಗೆ ಇಲಾಖೆ, ಇ.ಡಿ., ಸಿಬಿಐ ಮೊದಲಾದ ಸಂಸ್ಥೆಗಳನ್ನು ಪ್ರಶ್ನೆ ಮಾಡುತ್ತಾರೆ. ಈಗ ಹೈಕೋರ್ಟ್‌ ಕೆಪಿಎಸ್‌ಸಿ ಅಕ್ರಮದ ತನಿಖೆಗೆ ರಚಿಸಿದ ಎಸ್‌ಐಟಿಯನ್ನು ಕೂಡ ಪ್ರಶ್ನೆ ಮಾಡಿದ್ದಾರೆ. ಕಾಂಗ್ರೆಸ್‌ ನಾಯಕರು ಯಾವುದೇ ಸಾಂವಿಧಾನಿಕ ಸಂಸ್ಥೆಗಳನ್ನು ಬಿಟ್ಟಿಲ್ಲ. ರಾಹುಲ್‌ ಗಾಂಧಿ ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಇವರ ಪಕ್ಷ ದೇಶದಿಂದಲೇ ಕಾಣೆಯಾಗುತ್ತಿದೆ. ಅದಕ್ಕಾಗಿ ಜಿರಳೆ ಪಾರ್ಟಿಯನ್ನು ಹಿಡಿದುಕೊಂಡು ಮುಂದೆ ಬರುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಮಾಡುವ ಹೋರಾಟವನ್ನೇ ತಮ್ಮ ಹೋರಾಟ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಫಾರ್ಮ್‌ 7 ಆನ್‌ಲೈನ್‌ನಲ್ಲಿ ಸಿಗುತ್ತದೆ. ಅದನ್ನು ಸಲ್ಲಿಸಿದ ನಂತರ ತಪ್ಪಿದ್ದರೆ ಅದರ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳುತ್ತದೆ. ಕುಕ್ಕರ್‌ ಬಾಂಬ್‌ ಸ್ಪೋಟ ಮಾಡಿದ ಬ್ರದರ್‌ಗಳ ಪರವಾಗಿ ಇವರು ಹೋರಾಟ ಮಾಡುತ್ತಿದ್ದಾರೆ ಎಂದರು.

ಮಹಾತ್ಮ ಗಾಂಧೀಜಿ ಜಯಂತಿಯಂದು ನಾವು ಶಾಂತಿಯುತವಾಗಿ ಮನವಿ ಸಲ್ಲಿಸಿದ್ದೇವೆ. ಆದರೆ ಕಾಂಗ್ರೆಸ್‌ಗೆ ಗೂಂಡಾ ಸಂಸ್ಕೃತಿ ಇದ್ದು, ಅದನ್ನೇ ಪ್ರದರ್ಶನ ಮಾಡಿದ್ದಾರೆ ಎಂದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular