ಧಾರವಾಡ: ಗಣೇಶ ಹಬ್ಬ ಹಾಗೂ ಈದ್-ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಠಿಯಿಂದ ಮದ್ಯಪಾನ, ಮದ್ಯ ಮಾರಾಟ ಮತ್ತು ಮದ್ಯ ಸಾಗಾಣಿಕೆಯನ್ನು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಗ್ರಾಮೀಣ, ಧಾರವಾಡ ಗ್ರಾಮೀಣ, ಅಳ್ನಾವರ, ನವಲಗುಂದ, ಅಣ್ಣಿಗೇರಿ, ಕುಂದಗೋಳ, ಕಲಘಟಗಿ ತಾಲೂಕುಗಳಲ್ಲಿ ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಆಜ್ಞೆ ಹೊರಡಿಸಿದ್ದಾರೆ.
ಈ ಕುರಿತು ಆದೇಶಿಸಿರುವ ಅವರು, ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಗ್ರಾಮೀಣ, ಧಾರವಾಡ ಗ್ರಾಮೀಣ, ಅಳ್ನಾವರ, ನವಲಗುಂದ, ಅಣ್ಣಿಗೇರಿ, ಕುಂದಗೋಳ, ಕಲಘಟಗಿ ತಾಲೂಕುಗಳಲ್ಲಿ ಅಗಸ್ಟ್ 25, 2026 ರ ರಾತ್ರಿ 11:59 ಗಂಟೆಯಿಂದ ಅಗಸ್ಟ್ 26, 2026 ರ ರಾತ್ರಿ 11:59 ಗಂಟೆಯವರೆಗೆ ಮದ್ಯಪಾನ, ಮದ್ಯ ಮಾರಾಟ ಮತ್ತು ಮದ್ಯ ಸಾಗಾಣಿಕೆಯನ್ನು ನಿಷೇಧಿಸಿ, ಆದೇಶಿಸಲಾಗಿದೆ.
ಆದ್ದರಿಂದ ಯಾವತ್ತೂ ಭಾರತೀಯ ತಯಾರಿಕೆ ಮದ್ಯದ ಅಂಗಡಿಗಳು, ಬೀಯರ್ ಬಾರ್ಗಳು, ಕ್ಲಬ್ಗಳು ಮತ್ತು ಮದ್ಯದ ಡಿಪೋಗಳನ್ನು ಈ ನಿಷೇಧಾಜ್ಞೆ ಜಾರಿಯಲ್ಲಿರುವ ಅವಧಿಯಲ್ಲಿ ಮುಚ್ಚಿಸತಕ್ಕದ್ದು. ಇದಲ್ಲದೇ ಪರಿಸ್ಥಿತಿಗೆ ಅನುಗುಣವಾಗಿ ಸಾರ್ವಜನಿಕ ಶಾಂತತೆಯನ್ನು ಕಾಯ್ದುಕೊಂಡು ಬರುವ ಹಿತದೃಷ್ಟಿಯಿಂದ ಜಿಲ್ಲೆಯ ಅಬಕಾರಿ ಇನ್ಸ್ಪೆಕ್ಟರರ ಹಾಗೂ ಉಪವಿಭಾಗ ಅಬಕಾರಿ ಅಧೀಕ್ಷಕರು, ಕರ್ನಾಟಕ ಅಬಕಾರಿ ಕಾಯ್ದೆ- 1965ರ ಕಲಂ 21(2) ರ ಅನ್ವಯ ಅವಶ್ಯಕತೆ ಕಂಡುಬಂದಲ್ಲಿ, ಶಾಂತಿ ಪಾಲನೆಗಾಗಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಧಾರವಾಡ ಆರಕ್ಷಕ ಅಧೀಕ್ಷಕರು, ಉಪ ಆರಕ್ಷಕ ಅಧೀಕ್ಷಕರ, ಅಬಕಾರಿ ಉಪ ಆಯುಕ್ತರು ಹಾಗೂ ಹೆಚ್ಚುವರಿ ಅಬಕಾರಿ ಅಧೀಕ್ಷಕರು ಇವರು ತಮ್ಮ ವ್ಯಾಪ್ತಿಯಲ್ಲಿ ಈ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೆ ಬರುವಂತೆ ಕ್ರಮ ಜರುಗಿಸಬೇಕು ಎಂದು ಜಿಲ್ಲಾ ದಂಡಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ತಿಳಿಸಿದ್ದಾರೆ.

