ನವದೆಹಲಿ: ದೇಶಾದ್ಯಂತ ಸಕ್ಕರೆ ಬೆಲೆಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿವೆ. ಕಳೆದ ಹತ್ತು ದಿನಗಳಲ್ಲೇ ಸಕ್ಕರೆ ಬೆಲೆ ಕೆ.ಜಿ.ಗೆ ₹2ರಿಂದ ₹8ರವರೆಗೆ ಹೆಚ್ಚಾಗಿದೆ. ಬೆಲೆಗಳ ದಿಢೀರ್ ಏರಿಕೆಗೆ ಇಥನಾಲ್ ಉತ್ಪಾದನೆಗಾಗಿ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯನ್ನು ಬಳಸುತ್ತಿರುವುದೇ ಕಾರಣ ಎಂಬ ಆರೋಪಗಳು ಕೇಳಿಬಂದಿದ್ದವು.
E20 ಪೆಟ್ರೋಲ್ ಉತ್ಪಾದನೆಗಾಗಿ ಸಕ್ಕರೆಯನ್ನು ದೊಡ್ಡ ಪ್ರಮಾಣದಲ್ಲಿ ಇಥನಾಲ್ ಉತ್ಪಾದನೆಗೆ ತಿರುಗಿಸಲಾಗುತ್ತಿದೆ ಎಂಬ ಮಾತುಗಳು ಹರಿದಾಡಿದ್ದವು. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಸಕ್ಕರೆ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಸಕ್ಕರೆ ಬೆಲೆ ದಿಢೀರ್ ಏರಿಕೆಗೆ ಇಥನಾಲ್ ಉತ್ಪಾದನೆಗಾಗಿ ಸಕ್ಕರೆಯನ್ನು ಹೆಚ್ಚಾಗಿ ಬಳಸುತ್ತಿರುವುದೇ ಪ್ರಮುಖ ಕಾರಣ ಎಂಬ ಆರೋಪವನ್ನು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ತಳ್ಳಿಹಾಕಿದೆ. ದೇಶದಲ್ಲಿ ನಿರೀಕ್ಷೆಗಿಂತ ಕಡಿಮೆ ಸಕ್ಕರೆ ಉತ್ಪಾದನೆ, ಹಬ್ಬದ ಋತುವಿಗೂ ಮುನ್ನ ಹೆಚ್ಚಿದ ಬೇಡಿಕೆ, ಹವಾಮಾನ ಸಂಬಂಧಿತ ಬೆಳೆ ಹಾನಿ ಹಾಗೂ ಜಾಗತಿಕವಾಗಿ ಸಕ್ಕರೆ ಪೂರೈಕೆ ಕಡಿಮೆಯಾಗಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿವೆ ಎಂದು ತಿಳಿಸಿದೆ.
ಇದಲ್ಲದೆ, ವ್ಯಾಪಾರಿಗಳ ಬಳಿ ಸಕ್ಕರೆಯ ಭಾರಿ ಪ್ರಮಾಣದ ದಾಸ್ತಾನು ಇರುವುದು ಹಾಗೂ ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಏರಿಕೆಯಾಗಲಿದೆ ಎಂಬ ನಿರೀಕ್ಷೆಯೂ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಕೇವಲ ಇಥನಾಲ್ ಉತ್ಪಾದನೆಗಾಗಿ ಸಕ್ಕರೆಯನ್ನು ತಿರುಗಿಸಿರುವುದೇ ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದು ಹೇಳುವುದು ಸರಿಯಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ವಾಸ್ತವವಾಗಿ, ಇಥನಾಲ್ ಉತ್ಪಾದನೆಗೆ ಬಳಸಲಾಗುತ್ತಿರುವ ಸಕ್ಕರೆಯ ಪ್ರಮಾಣ ಹಿಂದಿಗಿಂತಲೂ ಕಡಿಮೆಯಾಗಿದೆ ಎಂದು ತಿಳಿಸಿದೆ.
2022-23ರಲ್ಲಿ ಇಥನಾಲ್ ಉತ್ಪಾದನೆಗೆ ತಿರುಗಿಸಲಾಗಿದ್ದ ಸಕ್ಕರೆಯ ಪ್ರಮಾಣ ಸುಮಾರು ಶೇ.12ರಷ್ಟಿತ್ತು. 2025-26ರ ಸೀಸನ್ನಲ್ಲಿ ಅದು ಶೇ.9ಕ್ಕೆ ಇಳಿಕೆಯಾಗಿದೆ. ಅಲ್ಲದೆ, ಇಥನಾಲ್ ಉತ್ಪಾದನೆಗೆ ಸಕ್ಕರೆಯ ಬದಲಿಗೆ ಜೋಳದಂತಹ ಧಾನ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಹೀಗಾಗಿ, ಪ್ರಸ್ತುತ ಸಕ್ಕರೆ ಬೆಲೆ ಏರಿಕೆಯನ್ನು ನೇರವಾಗಿ ಇಥನಾಲ್ ಉತ್ಪಾದನೆಗೆ ಸಂಬಂಧಿಸುವುದು ಸರಿಯಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

