ಚಾಮರಾಜನಗರ : ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಶಿಲುಬೆಪುರ ಅರಣ್ಯ ವ್ಯಾಪ್ತಿಯಲ್ಲಿ ದುಷ್ಕರ್ಮಿಗಳ ಕೃತ್ಯಗಳು ಹೆಚ್ಚಾಗಿದ್ದು, ಅರಣ್ಯ ಇಲಾಖೆ ಹಾಗೂ ವನ್ಯಜೀವಿಧಾಮದ ಭದ್ರತೆ ಬಗ್ಗೆ ಆತಂಕ ಮೂಡಿದೆ. ಇತ್ತೀಚೆಗೆ ನಡೆದ ಮೂವರ ಎನ್ಕೌಂಟರ್ ಬಳಿಕ ಈ ಘಟನೆಗಳು ನಡೆದಿರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.
ಮಲೆ ಮಹದೇಶ್ವರ ವನ್ಯಜೀವಿಧಾಮದ ಸುಮಾರು 10 ಎಕರೆ ಅರಣ್ಯ ಪ್ರದೇಶಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಅಪಾರ ಪ್ರಮಾಣದ ಅರಣ್ಯ ಸಂಪತ್ತು ಹಾನಿಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದಕ್ಕೂ ಕೆಲವೇ ದಿನಗಳ ಹಿಂದೆ ಕಾವೇರಿ ವನ್ಯಜೀವಿಧಾಮದ ಕಳ್ಳಬೇಟೆ ತಡೆ ಶಿಬಿರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿತ್ತು. ದುಷ್ಕರ್ಮಿಗಳು ಜಿಲೆಟಿನ್ ಕಡ್ಡಿಗಳನ್ನು ಬಳಸಿ ನಾಲ್ಕು ಎಪಿಸಿ ಕ್ಯಾಂಪ್ಗಳನ್ನು ಸ್ಫೋಟಿಸಿ ಹಾನಿಗೊಳಿಸಿದ್ದರು.
ಮೂವರು ಬೇಟೆಗಾರರ ಎನ್ಕೌಂಟರ್ ಬಳಿಕ ಕಾಡಿನಲ್ಲಿ ದುಷ್ಕರ್ಮಿಗಳ ಹಾವಳಿ ಹೆಚ್ಚಾಗಿದೆ ಎನ್ನಲಾಗಿದ್ದು, ಅರಣ್ಯ ಸಿಬ್ಬಂದಿ ಇದೀಗ ಪ್ರಾಣಭಯದಲ್ಲೇ ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಘಟನೆಗಳ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ತನಿಖೆಯನ್ನು ತೀವ್ರಗೊಳಿಸಿದೆ. ಮಲೆ ಮಹದೇಶ್ವರ ವನ್ಯಜೀವಿಧಾಮದ ಎಸಿಎಫ್ ವಿಜಯ್ ಹೊಸೂರು ಅವರ ಮಾಹಿತಿ ಪ್ರಕಾರ, ಅರಣ್ಯಕ್ಕೆ ಬೆಂಕಿ ಹಚ್ಚಿದವರು ಹಾಗೂ ಇತರ ಕೃತ್ಯಗಳ ಹಿಂದೆ ಇರುವ ದುಷ್ಕರ್ಮಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ.
ಮೂವರು ಬೇಟೆಗಾರರ ಎನ್‌ಕೌಂಟರ್
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮದ ಶಾಗ್ಯ ಅರಣ್ಯ ಪ್ರದೇಶದಲ್ಲಿ ಆಗಸ್ಟ್ 15ರಂದು ಅರಣ್ಯ ಸಿಬ್ಬಂದಿ ಮತ್ತು ಶಂಕಿತ ಬೇಟೆಗಾರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಘಟನೆಯಲ್ಲಿ ಮೂವರು ಶಂಕಿತ ಬೇಟೆಗಾರರು ಮೃತಪಟ್ಟಿದ್ದಾರೆ.
ಅರಣ್ಯ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ನಾಲ್ವರು ಶಂಕಿತ ಬೇಟೆಗಾರರು ಕಾಡಿನೊಳಗೆ ಪ್ರವೇಶಿಸಿ ವನ್ಯಜೀವಿ ಬೇಟೆಯಾಡಿದ್ದರು ಎನ್ನಲಾಗಿದೆ. ಅರಣ್ಯ ಸಿಬ್ಬಂದಿ ಗಸ್ತು ನಡೆಸುತ್ತಿದ್ದ ವೇಳೆ ಅವರನ್ನು ಪತ್ತೆಹಚ್ಚಿದ್ದು, ಬಂದೂಕುಗಳಿಂದ ಗುಂಡು ಹಾರಿಸಿದ ಬಳಿಕ ಅರಣ್ಯ ಸಿಬ್ಬಂದಿ ಪ್ರತಿದಾಳಿ ನಡೆಸಿದ್ದಾರೆ. ಈ ಗುಂಡಿನ ಚಕಮಕಿಯಲ್ಲಿ ಮೂವರು ಸಾವನ್ನಪ್ಪಿದ್ದು, ಒಬ್ಬ ಅರಣ್ಯ ಸಿಬ್ಬಂದಿಗೂ ಗಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯರಿಂದ ಆಕ್ರೋಶ
ಆದರೆ ಮೃತರ ಕುಟುಂಬಸ್ಥರು ಹಾಗೂ ಸ್ಥಳೀಯರು ಅರಣ್ಯ ಇಲಾಖೆಯ ಹೇಳಿಕೆಯನ್ನು ಪ್ರಶ್ನಿಸಿದ್ದಾರೆ. ಮೂವರು ಜಾನುವಾರುಗಳನ್ನು ಹುಡುಕಲು ಕಾಡಿಗೆ ತೆರಳಿದ್ದರು, ಅವರನ್ನು ಬೇಟೆಗಾರರೆಂದು ತಪ್ಪಾಗಿ ಗುರುತಿಸಿ ಗುಂಡಿಕ್ಕಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಘಟನೆ ಬಳಿಕ ಹನೂರು ಪೊಲೀಸ್ ಠಾಣೆ ಎದುರು ನೂರಾರು ಮಂದಿ ಪ್ರತಿಭಟನೆ ನಡೆಸಿ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದ್ದಾರೆ.
ಪ್ರಕರಣ ರಾಜಕೀಯ ತಿರುವು
ಮೂವರ ಸಾವಿನ ಬಳಿಕ ಕರ್ನಾಟಕದಲ್ಲಿ ರಾಜಕೀಯ ಚರ್ಚೆಯೂ ತೀವ್ರಗೊಂಡಿದೆ. ಪ್ರತಿಪಕ್ಷಗಳು ಪ್ರಕರಣದ ಬಗ್ಗೆ ಅನುಮಾನ ವ್ಯಕ್ತಪಡಿಸಿ ನ್ಯಾಯಾಂಗ ತನಿಖೆಗೆ ಆಗ್ರಹಿಸಿವೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ನ್ಯಾಯಾಂಗ ತನಿಖೆ ಹಾಗೂ ಮೃತರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
ಎನ್‌ಕೌಂಟರ್ ಬಳಿಕ ಮತ್ತೊಂದು ವಿವಾದ
ಮೂವರು ಬೇಟೆಗಾರರ ಸಾವಿನ ಬಳಿಕ ಈ ಭಾಗದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಕೆಲವು ಕಳ್ಳಬೇಟೆ ತಡೆ ಶಿಬಿರಗಳ ಮೇಲೆ ದಾಳಿ ಹಾಗೂ ಧ್ವಂಸ ನಡೆದಿದ್ದು, ಪೊಲೀಸರು ಈ ಪ್ರಕರಣಗಳ ತನಿಖೆ ನಡೆಸುತ್ತಿದ್ದಾರೆ.

