ತಿರುಪತಿ: ದೇಶಾದ್ಯಂತ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಡಗರ-ಸಂಭಮ ಮಣೆ ಮಾಡಿದೆ. ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಭಾಷಣ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡ ಸಚಿವರೊಬ್ಬರು ಕುಸಿದು ಬಿದ್ದ ಘಟನೆ ಆಂಧ್ರಪ್ರದೇಶದ ತಿರುಪತಿ ಮೈದಾನದಲ್ಲಿ ನಡೆದಿದೆ.
ತಿರುಪತಿಯ ಪೊಲೀಸ್ ಪರೇಡ್ ಮೈದಾನದಲ್ಲಿ ಈ ಘಟನೆ ನಡೆದಿದೆ. ಆಂಧ್ರಪ್ರದೇಶದ ಸಚಿವ ಆನಂ ರಾಮನಾರಾಯಣ ರೆಡ್ಡಿ ಅವರು ಇಂದು ವೇದಿಕೆಯಲ್ಲಿ ಭಾಷಣ ಮಾಡುವಾಗಲೇ ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣ ಪಕ್ಕದಲ್ಲಿದ್ದ ಭದ್ರತಾ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಸಚಿವರ ನೆರವಿಗೆ ಧಾವಿಸಿ ಪಕ್ಕದಲ್ಲಿದ್ದ ಚೇರ್ ಮೇಲೆ ಕೂರಿಸಿದ್ದಾರೆ.
ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ಸತತ ಒಂದು ಗಂಟೆಯಿಂದ ನಿಂತುಕೊಂಡೇ ಭಾಷಣ ಮಾಡುತ್ತಿದ್ದ ಸಚಿವರಿಗೆ ರಕ್ತದೊತ್ತಡ (BP) ಕಡಿಮೆಯಾಗಿ ಕುಸಿದು ಬಿದ್ದಿದ್ದಾರೆ. ವೇದಿಕೆಯಲ್ಲಿದ್ದ ಅಧಿಕಾರಿಗಳು ಹಾಗೂ ವೈದ್ಯಕೀಯ ಸಿಬ್ಬಂದಿ ಅವರ ನೆರವಿಗೆ ಆಗಮಿಸಿ ಸಚಿವರಿಗೆ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

