ಬೆಂಗಳೂರು: ಬೆಂಗಳೂರು ಮತದಾರರ ಪಟ್ಟಿಯಿಂದ ನಟ, ನಿರ್ದೇಶಕ ಪ್ರಕಾಶ್ ರಾಜ್ ಹೆಸರು ತೆಗೆದುಹಾಕಲಾಗಿದೆ. ಕರ್ನಾಟಕದಲ್ಲಿ ಎಸ್ಐಆರ್ (Special Intensive Revision ) ಪ್ರಕ್ರಿಯೆ ನಡೆಯುತ್ತಿದ್ದು, ಚುನಾವಣೆಯನ್ನು ಪಾರದರ್ಶಕವಾಗಿಸುವ ಉದ್ದೇಶದಿಂದ ಅಕ್ರಮ ಮತದಾರು, ಒಂದಕ್ಕಿಂತಲೂ ಹೆಚ್ಚು ಕ್ಷೇತ್ರಗಳಲ್ಲಿ ಮತ ಹೊಂದಿರುವವರು ಇನ್ನೂ ಹಲವು ಸಮಸ್ಯಾತ್ಮಕ ಮತದಾರರನ್ನು ಗುರುತಿಸಿ ಎಸ್ಐಆರ್ ಪ್ರಕ್ರಿಯೆ ಮೂಲಕ ಸ್ವಚ್ಛ ಮಾಡಲಾಗುತ್ತಿದೆ.
ನಟ ಪ್ರಕಾಶ್ ರಾಜ್ ಅವರ ವೋಟನ್ನು ಸಹ ಎಸ್ಐಆರ್ ಪ್ರಕ್ರಿಯೆ ಅಡಿಯಲ್ಲಿ ಡಿಲೀಟ್ ಮಾಡಲಾಗಿದೆ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಖುದ್ದು ಪ್ರಕಾಶ್ ರಾಜ್ ಮಾಹಿತಿ ಹಂಚಿಕೊಂಡಿದ್ದಾರೆ.
ವಿಡಿಯೋ ಹಂಚಿಕೊಂಡಿರುವ ನಟ ಪ್ರಕಾಶ್ ರಾಜ್, ‘ಎಸ್ಐಆರ್ ಕಾರಣಕ್ಕೆ ಬೆಂಗಳೂರಿನಿಂದ ಡಿಲೀಟ್ ಆಗಿರುವ 65 ಲಕ್ಷ ಮತದಾರರಲ್ಲಿ ನಾನೂ ಸಹ ಒಬ್ಬ. ನಾನು ಹುಟ್ಟಿ, ಬೆಳೆದ ಕ್ಷೇತ್ರದಿಂದಲೇ ನನ್ನ ಮತವನ್ನು ತೆಗೆದು ಹಾಕಲಾಗಿದೆ. ನಾನು ಅದೇ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಗೆ ಸಹ ಸ್ಪರ್ಧಿಸಿದ್ದೆ. ಆದರೂ ಸಹ ನನ್ನ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಇದು ಜೋಕ್ ಅಲ್ಲದೆ ಮತ್ತೇನು?’ ಎಂದು ಪ್ರಶ್ನೆ ಮಾಡಿದ್ದಾರೆ.
‘ನನ್ನ ಮತ ಡಿಲೀಟ್ ಆಗಿದೆ. ಅದನ್ನು ಮರಳಿ ಪಡೆಯಲು ಏನೇನು ಮಾಡಬೇಕೊ ಅದೆಲ್ಲವನ್ನೂ ಮಾಡುತ್ತೇನೆ. ಎಷ್ಟು ದಾಖಲೆಗಳನ್ನು ತೋರಿಸಬೇಕಾಗುತ್ತದೆಯೋ ನೋಡೋಣ. ನೀವು ನಿಮಗೆ ಮತಹಾಕದವ ಮತವನ್ನು ಡಿಲೀಟ್ ಮಾಡಿಬಿಡಬಹುದು ಆದರೆ ನಾವು ಸುಮ್ಮನೆ ಕೂರುವವರಲ್ಲ’ ಎಂದು ಕಿಡಿಕಾರಿದ್ದಾರೆ.
2024 ರಲ್ಲಿ ಅವರು ಬೆಂಗಳೂರು ಸೆಂಟ್ರಲ್ ಕ್ಷೇತ್ರದ, ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ನಲ್ಲಿ ಮತದಾನ ಸಹ ಮಾಡಿದರು. ಆದರೆ ಪ್ರಕಾಶ್ ರಾಜ್ ಒಂದಕ್ಕಿಂತಲೂ ಹೆಚ್ಚು ಕ್ಷೇತ್ರಗಳಲ್ಲಿ ಮತದಾನದ ಹಕ್ಕನ್ನು ಹೊಂದಿದ್ದಾರೆ ಎಂದು ಕೆಲ ವರ್ಷಗಳ ಹಿಂದೆಯೇ ದೂರು ದಾಖಲಾಗಿತ್ತು. 2019ರಲ್ಲಿಯೇ ಪ್ರಕಾಶ್ ರೈ ವಿರುದ್ಧ, ಒಂದಕ್ಕಿಂತಲೂ ಹೆಚ್ಚು ಕ್ಷೇತ್ರದಲ್ಲಿ ಮತದಾನದ ಹಕ್ಕನ್ನು ಹೊಂದಿರುವುದಕ್ಕೆ ದೂರು ದಾಖಲಾಗಿತ್ತು. ಅದರ ವಿಚಾರಣೆಯೂ ಚಾಲ್ತಿಯಲ್ಲಿತ್ತು. ಪ್ರಕಾಶ್ ರಾಜ್ ಬೆಂಗಳೂರಿನ ಶಾಂತಿನಗರ ಕ್ಷೇತ್ರದಲ್ಲಿ ಒಂದು, ಚೆನ್ನೈನ ವಲಚೆರಿಯಲ್ಲಿ ಎರಡು, ತೆಲಂಗಾಣದ ಸೆರಿಲಿಂಗಪಲ್ಲಿಯ ಮತದಾರರ ಪಟ್ಟಿಗಳಲ್ಲಿ ಹೆಸರು ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಗೈರು ಹಾಜರಾದ ಕಾರಣ, ವಿಚಾರಣೆಯಲ್ಲಿ ಪಾಲ್ಗೊಳ್ಳದ ಕಾರಣ ಪ್ರಕಾಶ್ ರೈ ವಿರುದ್ಧ 2025ರಲ್ಲಿ ನ್ಯಾಯಾಲಯವು ವಾರೆಂಟ್ ಹೊರಡಿಸಿತು. ಬಳಿಕ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 10, 2026ಕ್ಕೆ ನಟ ಪ್ರಕಾಶ್ ರೈ ಷರತ್ತುಬದ್ಧ ಜಾಮೀನು ಪಡೆದು ಕೊಂಡರು. ಪ್ರಕರಣ ಈಗಲೂ ವಿಚಾರಣೆಯ ಹಂತದಲ್ಲಿದೆ. ಒಂದಕ್ಕಿಂತಲೂ ಹೆಚ್ಚು ಕ್ಷೇತ್ರದಲ್ಲಿ ಮತದಾನದ ಹಕ್ಕು ಹೊಂದಿರುವ ಕಾರಣಕ್ಕೆ ಈಗ ಎಸ್ಐಆರ್ ಪ್ರಕ್ರಿಯೆಯಲ್ಲಿ ಪ್ರಕಾಶ್ ರಾಜ್ ಹೆಸರು ಡಿಲಿಟ್ ಆಗಿರುವ ಸಾಧ್ಯತೆ ಇದೆ.

