ಧಾರವಾಡ: ಠೇವಣಿ ಹಣ ಕೊಡದೇ ಪಂಗನಾಮ ಹಾಕಿದ ವಿ.ಎಸ್. ಸಾಧುನವರ ಸೊಸೈಟಿಗೆ ದಂಡ ವಿಧಿಸಿದ್ದು, ಪರಿಹಾರ ನೀಡಲು ಆದೇಶಿಸಲಾಗಿದೆ.
ಧಾರವಾಡದ ನಿವಾಸಿಯಾದ ಮುದಕಪ್ಪ ಎಮ್. ನಿಂಬೋಜಿ, ಪರಪ್ಪ ಗುಳಪ್ಪನವರ ಹಾಗೂ ನಾಗಪ್ಪ ಬಡಿಗೇರ, ಎಂಬುವವರು ಎದುರುದಾರರ ಸೊಸೈಟಿಯ ಸದಸ್ಯರಾಗಿ ಎಲ್ಲರೂ ಸೇರಿ ಸುಮಾರು 4 ಲಕ್ಷಕ್ಕಿಂತ ಹೆಚ್ಚು ಮೊತ್ತದ ಹಣವನ್ನು ಠೇವಣಿಯಾಗಿ ಇಟ್ಟಿದ್ದರು ಠೇವಣಿ ಅವಧಿ ಮುಗಿದ ಮೇಲೆ ಬಡ್ಡಿ ಸಮೇತ ತಮ್ಮ ಠೇವಣಿ ಹಣ ವಾಪಸ್ಸು ಕೊಡುವಂತೆ 3 ಜನ ದೂರುದಾರರು ಎದುರುದಾರರ ಸೊಸೈಟಿಗೆ ಹಲವು ಬಾರಿ ವಿನಂತಿಸಿದರೂ ಎದುರುದಾರರು ಹಣ ಹಿಂದಿರುಗಿಸಲಿಲ್ಲ. ದೂರುದಾರರ ಯಾವುದೇ ಕೋರಿಕೆಯನ್ನು ಅವರು ಪರಿಗಣಿಸಲಿಲ್ಲ. ಅಂತಹ ಎದುರುದಾರರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಎದುರುದಾರ ಸೊಸೈಟಿಯ ಚೇರ್ಮನರಾದ ವಿ.ಎಸ್. ಸಾಧುನವರ ಮೇಲೆ ಕ್ರಮ ಕೈಗೊಂಡು ತಮ್ಮ ಎಫ್.ಡಿ. ಮತ್ತು ಉಳಿತಾಯ ಖಾತೆಯ ಹಣವನ್ನು ಕೊಡಿಸುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿನಾಂಕ:20.03.2026 ರಂದು 3 ಜನ ಪ್ರತ್ಯೇಕ ದೂರುಗಳನ್ನು ಸಲ್ಲಿಸಿದ್ದರು.
ಸದರಿ ದೂರುಗಳನ್ನು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಮಹಿಳಾ ಸದಸ್ಯರು, ಪ್ರಭು. ಹಿರೇಮಠ ಸದಸ್ಯರು, ದೂರುದಾರರು ಎದುರುದಾರರ ಸೊಸೈಟಿಯಲ್ಲಿ ಎಫ್.ಡಿ ಮತ್ತು ಉಳಿತಾಯ ಖಾತೆಯನ್ನು ಹೊಂದಿರುತ್ತಾರೆ. ಠೇವಣಿ ಅವಧಿ ಮುಗಿದ ಮೇಲೆ ಬಡ್ಡಿ ಸಮೇತ ದೂರುದಾರರ ಹಣವನ್ನು ಹಿಂದಿರುಗಿಸುವುದು ಎದುರುದಾರ ಸೋಸೈಟಿಯ ಆದ್ಯ ಕರ್ತವ್ಯವಾಗಿದೆ. ಆದರೆ 3 ಜನ ದೂರುದಾರರು ಠೇವಣಿ ಅವಧಿ ಮುಗಿದ ಮೇಲೆ ಹಲವಾರುಬಾರಿ ಹೋಗಿ ಎದುರುದಾರರನ್ನು ತಮ್ಮ ಹಣ ವಾಪಸ್ಸು ಕೊಡುವಂತೆ ವಿನಂತಿಸಿದರೂ ಎದುರುದಾರ ಸೋಸೈಟಿಯವರ ಹಣ ಹಿಂದಿರುಗಿಸಿಲ್ಲ.
ಹಣ ಹಿಂದಿರುಗಿಸುವ ಬಗ್ಗೆ ಎದುರುದಾರರಿಂದ ಯಾವುದೇ ಭರವಸೆಯು ಇಲ್ಲವಾದ್ದರಿಂದ ಎದುರುದಾರರ ಸೋಸೈಟಿಯ ಚೇರ್ಮನ್ನರಾದ ವೀರುಪಾಕ್ಷಿ ಸಾಧುನವರ ಗ್ರಾಹಕರಾದ ದೂರುದಾರರಿಗೆ ಮೋಸ ವೆಸಗಿ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಆಯೋಗ ತೀರ್ಪು ನೀಡಿದೆ. ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಎಲ್ಲ 3 ಜನ ದೂರುದಾರರು ಇಟ್ಟಿರುವ ಠೇವಣಿ ಮತ್ತು ಅದರ ಮೇಲೆ ಬಡ್ಡಿ ಲೆಕ್ಕ ಹಾಕಿ ಹಿಂದಿರುಗಿಸುವಂತೆ ಆಯೋಗ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ತೊಂದರೆಗಾಗಿ ತಲಾ ರೂ.50,000/- ಪರಿಹಾರ ಹಾಗೂ ತಲಾ ರೂ.10,000/- ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ಚೇರ್ಮನ್ ವಿರುಪಾಕ್ಷಿ ಸಾಧುನವರಿಗೆ ನಿರ್ದೇಶಿಸಿದೆ.

