ಭಾರತೀಯ ಕ್ರಿಕೆಟ್ ತಂಡದ ಹಿರಿಯ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಕಂಬ್ಯಾಕ್ ಕನಸಿಗೆ ಮತ್ತೆ ಹಿನ್ನಡೆಯಾಗಿದೆ. ಬಲಗಾಲಿನ ಶೀನ್ (Shin) ಭಾಗದ ಗಾಯಕ್ಕೆ ಒಳಗಾಗಿರುವ ಅವರು, ಕನಿಷ್ಠ ಮೂರು ವಾರಗಳ ಕಾಲ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯಗಳಿಂದ ದೂರ ಉಳಿಯಲಿದ್ದಾರೆ. ಪರಿಣಾಮವಾಗಿ ಮುಂಬರುವ ಆಸ್ಟ್ರೇಲಿಯಾ ‘ಎ’ ವಿರುದ್ಧದ ಸರಣಿ ಹಾಗೂ ನ್ಯೂಜಿಲ್ಯಾಂಡ್ ವಿರುದ್ಧದ ವೈಟ್ ಬಾಲ್ ಸರಣಿಯಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ.
ಸೆಪ್ಟೆಂಬರ್ 20ರ ವೇಳೆಗೆ ಹಾರ್ದಿಕ್ ಮೈದಾನಕ್ಕೆ ಮರಳಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಅದಕ್ಕಾಗಿಯೇ ಆಯ್ಕೆಗಾರರು ಅಕ್ಟೋಬರ್ 6 ರಿಂದ ಪ್ರಾರಂಭವಾಗುವ ಆಸ್ಟ್ರೇಲಿಯಾ ‘ಎ’ ವಿರುದ್ಧದ ಏಕದಿನ ಸರಣಿಗೆ ಅವರನ್ನು ಭಾರತ ‘ಎ’ ತಂಡಕ್ಕೆ ಆಯ್ಕೆ ಮಾಡಿದ್ದರು. ಆದರೆ ಹೊಸ ಸ್ಕ್ಯಾನ್ ವರದಿಗಳು ಗಾಯದ ತೀವ್ರತೆಯನ್ನು ಸ್ಪಷ್ಟಪಡಿಸಿದ್ದು, ಬಿಸಿಸಿಐ ವೈದ್ಯಕೀಯ ಮಂಡಳಿಯು ಅವರಿಗೆ ಕನಿಷ್ಠ ಎರಡು ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಸೂಚಿಸಿದೆ.
ಫೀಲ್ಡಿಂಗ್ ಅಭ್ಯಾಸದ ಸಮಯದಲ್ಲಿ ಹಾರ್ದಿಕ್ ಅವರಿಗೆ ಮೊಣಕಾಲಿನ ಭಾಗದಲ್ಲಿ ತೀವ್ರ ನೋವು ಕಾಣಿಸಿಕೊಂಡಿತ್ತು. ಫಿಟ್ನೆಸ್ ಪ್ರಮಾಣಪತ್ರ ಪಡೆಯುವ ಹಂತದಲ್ಲಿದ್ದಾಗಲೇ ನೋವು ಮರುಕಳಿಸಿದ್ದು, ತಪಾಸಣೆ ನಡೆಸಿದಾಗ ಗಾಯವಾಗಿರುವುದು ದೃಢಪಟ್ಟಿದೆ. ಪ್ರಸ್ತುತ ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ತರಬೇತಿ ಪಡೆಯುತ್ತಿರುವ 32 ವರ್ಷದ ಪಾಂಡ್ಯ, ಕಳೆದ ನಾಲ್ಕು ತಿಂಗಳುಗಳಲ್ಲಿ ಮೂರನೇ ಬಾರಿಗೆ ಗಾಯದ ಸಮಸ್ಯೆಗೆ ಸಿಲುಕಿ ಕಂಬ್ಯಾಕ್ ಮಾಡಲು ಹೆಣಗಾಡುತ್ತಿದ್ದಾರೆ.
ಅಕ್ಟೋಬರ್ 22 ರಿಂದ ಪ್ರಾರಂಭವಾಗುವ ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಗೂ ಮುನ್ನ ಹಾರ್ದಿಕ್ ಚೇತರಿಸಿಕೊಳ್ಳುವ ಸಾಧ್ಯತೆಗಳು ಇಲ್ಲ. ಹೀಗಾಗಿ ಅವರು ಮುಂದಿನ ಜಿಂಬಾಬ್ವೆ ಏಕದಿನ ಸರಣಿ ಅಥವಾ ವಿಜಯ್ ಹಜಾರೆ, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಂತಹ ದೇಶಿ ಟೂರ್ನಿಗಳ ಮೂಲಕ ತಮ್ಮ ಫಿಟ್ನೆಸ್ ಸಾಬೀತುಪಡಿಸಿ ಮರಳಬೇಕಿದೆ.

