ಬುದ್ಧಿಯೊಂದಿದ್ದರೆ ಜಗತ್ತಿನಲ್ಲಿ ಹೇಗೆ ಬೇಕಾದರೂ ಹಣ ಸಂಪಾದಿಸಬಹುದು ಎನ್ನುವುದಕ್ಕೆ ಇಲ್ಲೊಬ್ಬರು ಜೀವಂತ ಉದಾಹರಣೆಯಾಗಿದ್ದಾರೆ. ಸುಮ್ಮನೆ ಸಮಯ ಹಾಳು ಮಾಡುತ್ತಾ ಗಾಳಿಮಾತುಗಳಲ್ಲಿ ತೊಡಗುವ ಜನರಿಗೆ ಈಕೆಯ ಹೊಸ ಬಿಸಿನೆಸ್ ಐಡಿಯಾ ಅಚ್ಚರಿ ತರಿಸದಿರದು. ನೆರೆಹೊರೆಯವರ ವಿಷಯಗಳನ್ನು ಸಂಗ್ರಹಿಸಿ ಮಾರಾಟ ಮಾಡುವುದನ್ನೇ ಕಾಯಕವಾಗಿಸಿಕೊಂಡು, ಅದರಿಂದ ಬಂದ ಆದಾಯದಲ್ಲೇ ಎರಡು ಭವ್ಯ ಮನೆಗಳನ್ನು ಖರೀದಿಸಿದ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ.
ಕೊಲಂಬಿಯಾದ ಆರ್ಮೇನಿಯಾ ನಗರದ ನಿವಾಸಿ, 67 ವರ್ಷದ ಮಿರಿಯಮ್ ಎಂಬ ವೃದ್ಧೆಯೇ ಈ ಅಪರೂಪದ ಗಾಸಿಪ್ ಉದ್ಯಮಿ. ಚಿಕ್ಕಂದಿನಿಂದಲೂ ಸುತ್ತಮುತ್ತಲಿನವರ ವಿಷಯಗಳನ್ನು ತಿಳಿದುಕೊಳ್ಳುವ ಅತಿಯಾದ ಆಸಕ್ತಿಯಿದ್ದ ಈಕೆ, ಅದನ್ನೇ ಬಂಡವಾಳ ಮಾಡಿಕೊಂಡು ಹಣ ಗಳಿಸುವ ಹಾದಿ ಕಂಡುಕೊಂಡಿದ್ದಾರೆ.
https://share.google/9LomCg655Qa3h4NHP
ಪ್ರತಿದಿನ ಬೆಳಿಗ್ಗೆ ತಮ್ಮ ಮನೆಯ ಅಂಗಳದಲ್ಲಿ ನೋಟ್‌ಬುಕ್ ಹಿಡಿದು ಕುಳಿತುಕೊಳ್ಳುವ ಮಿರಿಯಮ್, ನೆರೆಮನೆಯವರ ಕುಟುಂಬ ಜಗಳಗಳು, ವೈಯಕ್ತಿಕ ಗೊಂದಲಗಳು ಹಾಗೂ ಅಕ್ರಮ ಸಂಬಂಧಗಳಂತಹ ಸೂಕ್ಷ್ಮ ಸಂಗತಿಗಳನ್ನು ದಿನಾಂಕ, ಹೆಸರು ಮತ್ತು ಸಾಕ್ಷಿಯಾಗಿ ಫೋಟೋ ಸಹಿತ ದಾಖಲಿಸಿ ಇಟ್ಟುಕೊಳ್ಳುತ್ತಾರೆ. ತಮಗಿರುವಷ್ಟೇ ಕುತೂಹಲ ಇತರರಿಗೂ ನೆರೆಹೊರೆಯವರ ವಿಷಯಗಳಲ್ಲಿರುತ್ತದೆ ಎಂಬುದನ್ನು ಗ್ರಹಿಸಿದ ಈಕೆ, ತಮ್ಮ ಬಳಿಯಿದ್ದ “ಮಾಹಿತಿ ಸಂಗ್ರಹಕ್ಕೆ” ನಿರ್ದಿಷ್ಟ ದರ ನಿಗದಿಪಡಿಸಿ ಮಾರಾಟ ಮಾಡಲು ಶುರು ಮಾಡಿದರು.
ಸಾಮಾನ್ಯ ಚಾಡಿಮಾತುಗಳಿಗೆ 5,000 ದಿಂದ 10,000 ಕೊಲಂಬಿಯನ್ ಪೆಸೊ (ಸುಮಾರು $1.5 ರಿಂದ $3) ಈಡು ಮಾಡುವ ಮಿರಿಯಮ್, ಗಂಭೀರ ರಹಸ್ಯಗಳಿಗೆ ಭಾರಿ ಮೊತ್ತವನ್ನೇ ವಸೂಲಿ ಮಾಡುತ್ತಾರೆ. ಒಮ್ಮೆ ಪತ್ನಿ ಊರಿಗೆ ಹೋದಾಗ ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧವಿಟ್ಟುಕೊಂಡಿದ್ದ ವ್ಯಕ್ತಿಯೊಬ್ಬನ ರಹಸ್ಯವನ್ನು ಮುಚ್ಚಿಡಲು ಈಕೆ ಬರೋಬ್ಬರಿ 7 ಲಕ್ಷ ಕೊಲಂಬಿಯನ್ ಪೆಸೊ ಹಣ ಪಡೆದಿದ್ದರು! ವಿಶೇಷವೆಂದರೆ, ಆ ವ್ಯಕ್ತಿಯ ಪ್ರಿಯತಮೆಯಿಂದಲೂ ರಹಸ್ಯ ಕಾಯಲು ಹಣ ಪಡೆದ ಮಿರಿಯಮ್, ಬಳಿಕ ಆ ವ್ಯಕ್ತಿಯಿಂದಲೂ ಬಾಯಿ ಮುಚ್ಚಿರಲು ಪ್ರತ್ಯೇಕವಾಗಿ ಹಣ ವಸೂಲಿ ಮಾಡಿ ಎರಡೂ ಕಡೆಯಿಂದ ಲಾಭ ಮಾಡಿಕೊಂಡಿದ್ದಾರೆ.
ಸಾಕ್ಷಿಯಿಲ್ಲದೆ ಯಾರ ಬಗ್ಗೆಯೂ ಮಾತನಾಡದ ಮಿರಿಯಮ್, ವಾರದ ಸಂಪಾದನೆಯನ್ನು ದೊಡ್ಡ ಹುಂಡಿಯಲ್ಲಿ ಸಂಗ್ರಹಿಸಿಡುತ್ತಾರೆ. ಎರಡನೇ ಮನೆಯಲ್ಲಿ ಸ್ನೇಹಿತರ ಜೊತೆ ಪಾರ್ಚಿಸಿ ಆಟ ಆಡುತ್ತಲೇ ಹೊಸ ಹೊಸ ಸುದ್ದಿಗಳನ್ನು ಕಲೆಹಾಕುವ ಈಕೆ, ತಮ್ಮನ್ನು ತಾವೇ ತಮಾಷೆಯಾಗಿ “ಗಾಸಿಪ್‌ಗಳ ರಾಣಿ” ಎಂದು ಕರೆದುಕೊಳ್ಳುತ್ತಾರೆ. “ಗಾಸಿಪ್ ಎನ್ನುವುದು ನನ್ನ ರಕ್ತದಲ್ಲೇ ಇದೆ, ಜಗತ್ತು ಇರುವವರೆಗೆ ಈ ಉದ್ಯಮಕ್ಕೆ ಎಂದಿಗೂ ಅಂತ್ಯವಿಲ್ಲ” ಎನ್ನುತ್ತಾರೆ ಈ ಚಾಲಾಕಿ ವೃದ್ಧೆ.

