ಭಾರತೀಯ ರಿಸರ್ವ್ ಬ್ಯಾಂಕ್ (RBI) ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದಲ್ಲಿ ಬುಧವಾರ ನಡೆದ ಹಣಕಾಸು ನೀತಿ ಸಮಿತಿ (MPC) ಸಭೆಯಲ್ಲಿ ರೆಪೋ ದರವನ್ನು 5.25%ರಲ್ಲೇ ಯಥಾಸ್ಥಿತಿಯಲ್ಲಿ ಉಳಿಸಲು ನಿರ್ಧರಿಸಲಾಗಿದೆ. ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆಯಿಂದ ದೇಶೀಯ ಹಣದುಬ್ಬರದ ಮೇಲೆ ಉಂಟಾಗಬಹುದಾದ ಪರಿಣಾಮದ ಬಗ್ಗೆ ಇನ್ನಷ್ಟು ಸ್ಪಷ್ಟತೆ ಸಿಗುವವರೆಗೆ ಕಾಯುವ ನಿಲುವನ್ನು ಆರ್‌ಬಿಐ ಅನುಸರಿಸಿದೆ.
ಆರು ಸದಸ್ಯರ ಹಣಕಾಸು ನೀತಿ ಸಮಿತಿ (MPC) ಏಕಮತದಿಂದ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ತೀರ್ಮಾನಿಸಿತು. ಜೊತೆಗೆ, ತನ್ನ “ತಟಸ್ಥ (Neutral)” ಹಣಕಾಸು ನೀತಿ ನಿಲುವನ್ನೂ ಮುಂದುವರಿಸಿದೆ. ಇದರಿಂದ ಮುಂದಿನ ಬಡ್ಡಿದರ ನಿರ್ಧಾರಗಳು ಆರ್ಥಿಕ ಅಂಕಿ-ಅಂಶಗಳು ಮತ್ತು ಪರಿಸ್ಥಿತಿಗಳನ್ನು ಆಧರಿಸಿರಲಿವೆ ಎಂಬ ಸಂದೇಶ ನೀಡಿದೆ.
ಈ ನಿರ್ಧಾರವನ್ನು ಮಾರುಕಟ್ಟೆಯೂ ನಿರೀಕ್ಷಿಸಿತ್ತು. ರಾಯಿಟರ್ಸ್ ನಡೆಸಿದ ಸಮೀಕ್ಷೆಯಲ್ಲಿ ಭಾಗವಹಿಸಿದ್ದ 72 ಅರ್ಥಶಾಸ್ತ್ರಜ್ಞರಲ್ಲಿ 68 ಮಂದಿ, ಜಾಗತಿಕ ಅನಿಶ್ಚಿತತೆ ಮತ್ತು ಹಣದುಬ್ಬರದ ಅಪಾಯಗಳ ಹಿನ್ನೆಲೆಯಲ್ಲಿ ಆರ್‌ಬಿಐ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಉಳಿಸಲಿದೆ ಎಂದು ಅಂದಾಜಿಸಿದ್ದರು.
ರೆಪೋ ದರ ಯಥಾಸ್ಥಿತಿಯಲ್ಲಿ ಉಳಿಸಿದ್ದು ಏಕೆ?
ಇತ್ತೀಚಿನ ತಿಂಗಳುಗಳಲ್ಲಿ ಆಹಾರ ಮತ್ತು ಇಂಧನದ ಬೆಲೆ ಏರಿಕೆಯಿಂದ ಚಿಲ್ಲರೆ ಹಣದುಬ್ಬರ (Retail Inflation) ಹೆಚ್ಚಾದರೂ, ಅದು ಇನ್ನೂ ಆರ್‌ಬಿಐ ನಿಗದಿಪಡಿಸಿರುವ ಸುರಕ್ಷಿತ ಮಿತಿಯೊಳಗೇ ಇದೆ.
ಆದರೆ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಿಂದ ಹಣದುಬ್ಬರ ಮತ್ತಷ್ಟು ಹೆಚ್ಚುವ ಸಾಧ್ಯತೆ ಇರುವುದರಿಂದ, ಅದರ ಪರಿಣಾಮವನ್ನು ಪರಿಶೀಲಿಸಲು ಆರ್‌ಬಿಐ ತಾಳ್ಮೆಯ ನಿಲುವು ತಳೆದಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ, ಭೌರಾಜಕೀಯ ಉದ್ವಿಗ್ನತೆ ಹಾಗೂ ಇಂಧನ ಬೆಲೆ ಏರಿಕೆಯ ಪರಿಣಾಮವಾಗಿ ಜಾಗತಿಕ ಹಣದುಬ್ಬರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಲವು ದೇಶಗಳ ಕೇಂದ್ರ ಬ್ಯಾಂಕ್‌ಗಳು ಈಗಾಗಲೇ ಬಡ್ಡಿದರಗಳನ್ನು ಕಠಿಣಗೊಳಿಸಿರುವುದು ಗಮನಾರ್ಹ.
ಸಾಲಗಾರರ ಮೇಲೆ ಏನು ಪರಿಣಾಮ?
ರೆಪೋ ದರ 5.25%ರಲ್ಲೇ ಮುಂದುವರಿದಿರುವುದರಿಂದ, ರೆಪೋ ದರಕ್ಕೆ ಸಂಬಂಧಿಸಿದ ಗೃಹ ಸಾಲ, ವಾಹನ ಸಾಲ ಹಾಗೂ ಇತರೆ ಫ್ಲೋಟಿಂಗ್ ಬಡ್ಡಿದರದ ಸಾಲಗಳನ್ನು ಹೊಂದಿರುವವರಿಗೆ ಸದ್ಯಕ್ಕೆ ಇಎಂಐ (EMI) ಮೊತ್ತದಲ್ಲಿ ಯಾವುದೇ ಬದಲಾವಣೆ ಆಗುವ ಸಾಧ್ಯತೆ ಇಲ್ಲ.
ಹಾಗೆಯೇ, ಬ್ಯಾಂಕ್‌ಗಳು ತಮ್ಮ ಸಾಲ ಮತ್ತು ಠೇವಣಿ ಬಡ್ಡಿದರಗಳಲ್ಲೂ ತಕ್ಷಣದ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ. ದ್ರವ್ಯತೆ (Liquidity) ಅಥವಾ ನಿಧಿ ಸಂಗ್ರಹ ವೆಚ್ಚದಲ್ಲಿ ಮಹತ್ತರ ಬದಲಾವಣೆ ಕಂಡುಬಂದರೆ ಮಾತ್ರ ಬಡ್ಡಿದರಗಳಲ್ಲಿ ಪರಿಷ್ಕರಣೆ ಸಾಧ್ಯ.
ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಉತ್ತೇಜನ
ರಾಯಲ್ ಗ್ರೀನ್ ರಿಯಾಲ್ಟಿ ವ್ಯವಸ್ಥಾಪಕ ನಿರ್ದೇಶಕ ಯಶಾಂಕ್ ವಾಸನ್ ಮಾತನಾಡಿ,”ಆರ್‌ಬಿಐ ಎಂಪಿಸಿಯು ರೆಪೋ ದರವನ್ನು 5.25%ರಲ್ಲೇ ಮುಂದುವರಿಸಿರುವುದು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಅತ್ಯಂತ ಸಕಾರಾತ್ಮಕ ಬೆಳವಣಿಗೆಯಾಗಿದೆ. ಗೃಹ ಖರೀದಿದಾರರಿಗೆ ಬಡ್ಡಿದರ ಏರಿಕೆಯಾಗದ ಕಾರಣ ಇಎಂಐ ಭಾರ ನಿಯಂತ್ರಣದಲ್ಲಿರುತ್ತದೆ. ಇದರಿಂದ ಮನೆ ಖರೀದಿಸುವ ಆಸಕ್ತಿ ಹೆಚ್ಚಾಗಲಿದೆ. ಅಭಿವೃದ್ಧಿಪರರಿಗೆ (ಡೆವಲಪರ್‌ಗಳಿಗೆ) ಹೊಸ ಯೋಜನೆಗಳನ್ನು ಆರಂಭಿಸಲು ಮತ್ತು ಅವುಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಈ ನಿರ್ಧಾರ ಸಹಕಾರಿಯಾಗಲಿದೆ,” ಎಂದು ಹೇಳಿದರು.

