ಬೆಂಗಳೂರು: 2026-27ನೇ ಸಾಲಿನಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು, ಅಧಿಕಾರಿ ಹಾಗೂ ಸಿಬ್ಬಂದಿಯ ವೇತನ ಪಾವತಿಗಾಗಿ ರಾಜ್ಯ ಸರ್ಕಾರ 560.24 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಮೂರನೇ ತ್ರೈಮಾಸಿಕ ಅವಧಿಯಾದ ಅಕ್ಟೋಬರ್‌ನಿಂದ ಡಿಸೆಂಬರ್ 2026ರವರೆಗೆ ಮೂರು ತಿಂಗಳ ವೇತನ ಪಾವತಿಗೆ ಈ ಅನುದಾನವನ್ನು ಬಳಸಲಾಗುತ್ತದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಹಾಗೂ ಸಿಬ್ಬಂದಿಯ ವೇತನ ವೆಚ್ಚಕ್ಕಾಗಿ ಈ ಅನುದಾನ ಬಿಡುಗಡೆ ಮಾಡಲಾಗಿದೆ.
560.24 ಕೋಟಿ ರೂ. ಅನುದಾನ
ಸರ್ಕಾರದ ಅಕ್ಟೋಬರ್ 1, 2026ರ ಆದೇಶದಂತೆ 56,024.57 ಲಕ್ಷ, ಅಂದರೆ 560.2457 ಕೋಟಿ ರೂ. ಅನುದಾನವನ್ನು ಮೂರನೇ ತ್ರೈಮಾಸಿಕ ವೇತನ ಪಾವತಿಗೆ ಬಿಡುಗಡೆ ಮಾಡಲು ಅನುಮತಿ ನೀಡಲಾಗಿದೆ.
2026-27ನೇ ಸಾಲಿನ ಆಯವ್ಯಯದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕದ ಶಿಕ್ಷಕರ ವೇತನಕ್ಕಾಗಿ ಒಟ್ಟು 2,264.007 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದ್ದು, ಅದರಲ್ಲಿ ಅಕ್ಟೋಬರ್–ಡಿಸೆಂಬರ್ ಅವಧಿಗೆ ಈ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ.
ಜಿಲ್ಲೆ–ತಾಲೂಕುಗಳಿಗೆ ಹಂಚಿಕೆ
ಬಿಡುಗಡೆಯಾದ ಅನುದಾನವನ್ನು ಜಿಲ್ಲಾವಾರು ಮತ್ತು ತಾಲೂಕುವಾರು ಹಂಚಿಕೆ ಮಾಡಿ, ಖಜಾನೆಯಲ್ಲಿ ಅಪ್‌ಲೋಡ್ ಮಾಡುವಂತೆ ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರಿಗೆ ಸೂಚಿಸಲಾಗಿದೆ. ಅರ್ಹ ಶಿಕ್ಷಕರು ಮತ್ತು ಸಿಬ್ಬಂದಿಗೆ ನಿಯಮಾನುಸಾರ ವೇತನ ಪಾವತಿಸುವ ಜವಾಬ್ದಾರಿಯನ್ನು ಸಂಬಂಧಿಸಿದ ಡಿಡಿಒಗಳಿಗೆ ನೀಡಲಾಗಿದೆ.
ಪ್ರತಿ ತಿಂಗಳ 5ರೊಳಗೆ ವೇತನ ಪಾವತಿ
ಆದೇಶದಲ್ಲಿ ವೇತನ ಪಾವತಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಅರ್ಹತೆ ಹೊಂದಿರುವ ಶಿಕ್ಷಕರು ಹಾಗೂ ಸಿಬ್ಬಂದಿಗೆ ಪ್ರತಿ ತಿಂಗಳ 5ನೇ ತಾರೀಖಿನೊಳಗೆ ವೇತನ ಬಿಡುಗಡೆ ಆಗುವಂತೆ ಸಂಬಂಧಿಸಿದ ಡಿಡಿಒಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.
ವೇತನ ಪಾವತಿಯಲ್ಲಿ ವಿಳಂಬವಾದರೆ ಸಂಬಂಧಿಸಿದ ಡಿಡಿಒಗಳನ್ನೇ ಹೊಣೆಗಾರರನ್ನಾಗಿ ಮಾಡಿ, ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಲಾಗಿದೆ.
ಬಳಕೆ ಪ್ರಮಾಣ ಪತ್ರ ಕಡ್ಡಾಯ
ಬಿಡುಗಡೆಯಾದ ಅನುದಾನವನ್ನು ನಿಗದಿತ ಉದ್ದೇಶಕ್ಕೇ ಬಳಸಬೇಕು. ಪ್ರತಿ ತಿಂಗಳು ವೇತನ ಪಾವತಿಗೆ ಸಂಬಂಧಿಸಿದ ಬಳಕೆ ಪ್ರಮಾಣ ಪತ್ರ (Utilisation Certificate) ಪಡೆಯುವಂತೆ ಸೂಚಿಸಲಾಗಿದೆ. ಮುಂದಿನ ಕಂತಿನ ಅನುದಾನ ಬಿಡುಗಡೆಗೂ ಈ ಪ್ರಮಾಣ ಪತ್ರ ಪ್ರಮುಖವಾಗಿರಲಿದೆ.
ಒಟ್ಟಿನಲ್ಲಿ, ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಸಿಬ್ಬಂದಿಯ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ಮೂರು ತಿಂಗಳ ವೇತನ ಪಾವತಿಗೆ 560.24 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.
ಆಹಾರ ದಸರಾ ಸಮಿತಿ ವತಿಯಿಂದ ವಿವಿಧ ಕಾರ್ಯಕ್ರಮಗಳು
ಶಿವಮೊಗ್ಗ: ಶಿವಮೊಗ್ಗ ದಸರಾ -2026ರ ಪ್ರಯುಕ್ತ ಆಹಾರ ದಸರಾ ಸಮಿತಿ ವತಿಯಿಂದ ನಗರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಅ.15 ರಂದು ಸಂಜೆ 6 ಗಂಟೆಗೆ, ಅಲ್ಲಮಪ್ರಭು ಮೈದಾನ (ಫ್ರೀಡಂ ಪಾರ್ಕ್)ದಲ್ಲಿ ಆಹಾರ ಮೇಳ – ಮಲೆನಾಡ ಸಾಂಪ್ರದಾಯಿಕ ವಿಶಿಷ್ಟ ಅಡುಗೆಗಳ ಪ್ರದರ್ಶನ ಮತ್ತು ಮಾರಾಟ.
ಅ.16 ರಂದು ಬೆಳಗ್ಗೆ 10.00ಕ್ಕೆ ವೀರಶೈವ ಕಲ್ಯಾಣ ಮಂಟಪದಲ್ಲಿ ಸಹೋದರ-ಸಹೋದರಿಯರಿಮದ ಶೇಂಗಾ ಮತ್ತು ಕೊಬ್ಬರಿ ಉಪಯೋಗಿಸಿ ತಯಾರಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಅ.17 ರಂದು ಬೆಳಿಗ್ಗೆ 10.00ಕ್ಕೆ ಶಿವಪ್ಪ ನಾಯಕ ಸರ್ಕಲ್‌ನಲ್ಲಿ ಸಂಚಾರಿ ಪೊಲೀಸ್‌ರಿಗೆ ಹಾಗೂ ಸಾರ್ವಜನಿಕರಿಗೆ ಇಡ್ಲಿ ಮತ್ತು ಹಣ್ಣು ತಿನ್ನುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಆಸಕ್ತರು ಸ್ಪರ್ಧೆಗಳ ನೋಂದಣೆಗಾಗಿ ಮೊ.ಸಂ.: 9886033982/ 9902525752/ 8123214210 ಗಳನ್ನು ಸಂಪರ್ಕಿಸುವಂತೆ ಆಹಾರ ದಸರಾ ಸಮಿತಿ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

