HomeAgricultureಕೇಂದ್ರ ಬರ ಅಧ್ಯಯನ ತಂಡಕ್ಕೆ ತೀವ್ರ ಮಳೆ ಕೊರತೆ, ಬೆಳೆ ಹಾನಿ, ಅಂತರ್ಜಲ ಕುಸಿತ, ಕುಡಿಯುವ...

ಕೇಂದ್ರ ಬರ ಅಧ್ಯಯನ ತಂಡಕ್ಕೆ ತೀವ್ರ ಮಳೆ ಕೊರತೆ, ಬೆಳೆ ಹಾನಿ, ಅಂತರ್ಜಲ ಕುಸಿತ, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮನವರಿಕೆ

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಉಂಟಾಗಿರುವ ತೀವ್ರ ಬರ ಪರಿಸ್ಥಿತಿಯನ್ನು ಅವಲೋಕಿಸಲು ಮತ್ತು ಅಧ್ಯಯನ ನಡೆಸಲು ಕೇಂದ್ರ ಸರ್ಕಾರದ ಅಂತರ ಸಚಿವಾಲಯದ ಕೇಂದ್ರ ಅಧ್ಯಯನ ತಂಡ ಭಾನುವಾರ ಜಿಲ್ಲೆಗೆ ಆಗಮಿಸಿ ಅಧ್ಯಯನ ನಡೆಸಿತು.

ಜಿಲ್ಲಾಡಳಿತವು ಕೇಂದ್ರ ತಂಡಕ್ಕೆ ಮಳೆ ಕೊರತೆ, ಬೆಳೆ ಹಾನಿ, ಅಂತರ್ಜಲ ಕುಸಿತ ಹಾಗೂ ಕುಡಿಯುವ ನೀರಿನ ಸಮಸ್ಯೆ ಕುರಿತಾದ ಸಮಗ್ರ ಅಂಕಿ-ಅಂಶಗಳ ವಿವರವನ್ನು ಕೇಂದ್ರ ತಂಡದ ಮುಂದೆ ಮಂಡಿಸಿ, ಎನ್.ಡಿ.ಆರ್.ಎಫ್. ನಿಯಮಾವಳಿಗಳ ಅನ್ವಯ ಪರಿಹಾರದ ಅಂಕಿ ಅಂಶಗಳ ವಿವರವನ್ನು ಮನವರಿಕೆ ಮಾಡಿಕೊಡಲಾಯಿತು. 

ಜಿಲ್ಲೆಯಲ್ಲಿ ಶೇ. 39ರಷ್ಟು ಮಳೆ ಕೊರತೆ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೈರುತ್ಯ ಮುಂಗಾರು ಅವಧಿಯಲ್ಲಿ (ಜೂನ್ 1 ರಿಂದ ಸೆಪ್ಟೆಂಬರ್ 28 ರವರೆಗೆ) ಜಿಲ್ಲೆಯ ವಾಡಿಕೆ ಮಳೆಯಾದ 392.9 ಮಿ.ಮೀ. ಬದಲಿಗೆ ಕೇವಲ 238.5 ಮಿ.ಮೀ. ಮಳೆಯಾಗಿದ್ದು, ಒಟ್ಟಾರೆ ಶೇ. 39ರಷ್ಟು ಕೊರತೆ ದಾಖಲಾಗಿದೆ.  ಜಿಲ್ಲೆಯ ಎಲ್ಲಾ 6 ತಾಲೂಕುಗಳೂ ಬರಪೀಡಿತ ಎಂದು ಘೋಷಣೆಯಾಗಿವೆ.

ತಾಲೂಕುವಾರು ಮಳೆ ಕೊರತೆ:

ಚನ್ನಗಿರಿ (-43%), ದಾವಣಗೆರೆ (-30%), ಹರಿಹರ (-42%), ಹೊನ್ನಾಳಿ (-47%), ಜಗಳೂರು (-44%), ಮತ್ತು ನ್ಯಾಮತಿ (-48%).  ಸತತ 3 ರಿಂದ 4 ವಾರಗಳ ಕಾಲ ಸುದೀರ್ಘ ಡ್ರೈಸ್ಪೆಲ್ (ಮಳೆಯಿಲ್ಲದ ದಿನಗಳು) ಉಂಟಾಗಿದ್ದು, ಜಮೀನಿನಲ್ಲಿ ತೇವಾಂಶ ಸಂಪೂರ್ಣ ಕುಸಿದಿದೆ. 

ಬೃಹತ್ ಬೆಳೆ ಹಾನಿ ಹಾಗೂ ಬಿತ್ತನೆ ವೈಫಲ್ಯ:

ಜಿಲ್ಲೆಯಲ್ಲಿ ಒಟ್ಟು 2,14,938 ಹೆಕ್ಟೇರ್ ಕೃಷಿ ವಿಸ್ತೀರ್ಣದ ಗುರಿಯ ಪೈಕಿ ಕೇವಲ 1,39,340 ಹೆಕ್ಟೇರ್ನಲ್ಲಿ (ಶೇ. 64.83) ಮಾತ್ರ ಬಿತ್ತನೆಯಾಗಿದೆ.  ಶೇ. 33ಕ್ಕಿಂತ ಹೆಚ್ಚು ಬೆಳೆ ಹಾನಿ: ಒಟ್ಟು 1,26,113.18 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ (ಕೃಷಿ ಬೆಳೆ: 1,24,022 ಹೆಕ್ಟೇರ್, ತೋಟಗಾರಿಕೆ ಬೆಳೆ: 1,491.18 ಹೆಕ್ಟೇರ್).  ಪ್ರಮುಖ ಬೆಳೆಗಳಾದ ಮೆಕ್ಕೆಜೋಳ (51,880 ಹೆಕ್ಟೇರ್), ರಾಗಿ (17,344 ಹೆಕ್ಟೇರ್), ತೊಗರಿ (4,687 ಹೆಕ್ಟೇರ್) ಹಾಗೂ ಈರುಳ್ಳಿ ಮುಂತಾದ ಬೆಳೆಗಳು ಒಣಗಿ ತೀವ್ರ ಹಾನಿಗೊಳಗಾಗಿವೆ.  ಹರಿಹರ ಮತ್ತು ಜಗಳೂರು ತಾಲೂಕುಗಳಲ್ಲಿ ಮಳೆ ಅಭಾವದಿಂದ ಬಿತ್ತನೆ ಮಾಡಲಾಗದೆ (Prevented Sowing) 24,477 ಹೆಕ್ಟೇರ್ಗೆ ಸಂಬಂಧಿಸಿದಂತೆ 42.57 ಕೋಟಿ ಮೊತ್ತದ ಬೆಳೆ ವಿಮೆ ಕ್ಲೈಮ್ ನಿರೀಕ್ಷಿಸಲಾಗಿದೆ. 

ಕೆರೆಗಳಲ್ಲಿ ನೀರಿಲ್ಲ, ತೀವ್ರಗೊಂಡ ಅಂತರ್ಜಲ ಕುಸಿತ:

ಜಿಲ್ಲೆಯ ಒಟ್ಟು 600 ಸಣ್ಣ ನೀರಾವರಿ, ಜಿ.ಪಂ., ಅರಣ್ಯ ಹಾಗೂ ಇತರ ಇಲಾಖೆಯ ಕೆರೆಗಳ ಪೈಕಿ 463 ಕೆರೆಗಳಲ್ಲಿ ಶೇ. 30ಕ್ಕಿಂತ ಕಡಿಮೆ ನೀರಿದೆ. ಒಂದೇ ಒಂದು ಕೆರೆಯೂ ಶೇ. 100ರಷ್ಟು ಭರ್ತಿಯಾಗಿಲ್ಲ. ಅಂತರ್ಜಲ ಮಟ್ಟವು ಕಳೆದ ವರ್ಷದ ಸರಾಸರಿ 5.63 ಮೀಟರ್ನಿಂದ ಪ್ರಸ್ತುತ 12.73 ಮೀಟರ್ಗೆ ಕುಸಿದಿದ್ದು, ಸರಾಸರಿ 7.1 ಮೀಟರ್ ನೀರಿನ ಮಟ್ಟ ಕುಸಿತ ಕಂಡಿದೆ. ಜಗಳೂರು (151.7%) ಹಾಗೂ ಚನ್ನಗಿರಿ (125.17%) ತಾಲೂಕುಗಳು ಅಂತರ್ಜಲ ಅತಿಯಾಗಿ ಬಳಕೆಯಾದ (Over Exploited) ಅತಿ ಸೂಕ್ಷ್ಮ ವಲಯಗಳಾಗಿವೆ. 

ಕುಡಿಯುವ ನೀರು ಹಾಗೂ ಮೇವಿನ ಪರಿಸ್ಥಿತಿ:

ಪ್ರಸ್ತುತ ಜಿಲ್ಲೆಯ 27 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, 13 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಹಾಗೂ 30 ಖಾಸಗಿ ಬೋರ್ವೆಲ್ ಗಳನ್ನು ಬಾಡಿಗೆಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ. ಮುಂಬರುವ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ 161 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಹೆಚ್ಚುವ ಸಂಭವವಿದೆ. ಜಿಲ್ಲೆಯ 2.48 ಲಕ್ಷ ದೊಡ್ಡ ಜಾನುವಾರು ಹಾಗೂ 3.16 ಲಕ್ಷ ಸಣ್ಣ ಜಾನುವಾರುಗಳಿಗೆ ಮುಂದಿನ 24 ವಾರಗಳಿಗೆ ಸಾಕಾಗುವಷ್ಟು ಮೇವಿನ ಸಂಗ್ರಹವಿದ್ದು, ಮುಂದಿನ ದಿನಗಳಿಗಾಗಿ 11,752 ಮೇವಿನ ಮಿನಿಕಿಟ್ಗಳನ್ನು ವಿತರಿಸಿ ಮೇವು ಉತ್ಪಾದನೆಗೆ ಕ್ರಮ ವಹಿಸಲಾಗಿದೆ ಎಂದು ವರದಿ ನೀಡಲಾಯಿತು.

ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳಾದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ – IMCT ತಂಡದ ನಾಯಕ (TL) ಮತ್ತು ತಂಡ 1ರ ಗ್ರೂಪ್ ಲೀಡರ್ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ತಂಡದ ನೇತೃತ್ವ ವಹಿಸಿದ್ದರು. ತಂಡದಲ್ಲಿ ಚೇತ್ ರಾಮ್ ಮೀನಾ, ನೀತಿ ಆಯೋಗದ ಲೆಫ್ಟಿನೆಂಟ್ ಕರ್ನಲ್ ಅಮರೇಂದ್ರ ಸಿಂಗ್ ಹಾಗೂ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆಯ ನಿರ್ದೇಶಕರಾದ(ಮೇಲ್ವಿಚಾರಣೆ),  ಡಾ.ಜೆ. ಹರ್ಷ ಅವರನ್ನೊಳಗೊಂಡ ನಾಲ್ಕು ಸದಸ್ಯರ ಅಧ್ಯಯನ ತಂಡವು, ದಾವಣಗೆರೆ ತಾಲೂಕಿನ ನಿರ್ಥಡಿ ಗ್ರಾಮದಲ್ಲಿ ಬರಪೀಡಿತ ಮೆಕ್ಕೆಜೋಳ ಬೆಳೆ ಪರಿಶೀಲನೆ ಮಾಡಿದರು. ನಂತರ ನ್ಯಾಮತಿ ತಾಲೂಕಿನ ಮದನಭಾವಿ ಗ್ರಾಮದಲ್ಲಿ ಕೆರೆ ವೀಕ್ಷಣೆ ಹಾಗೂ ಪರಿಶೀಲನೆ ಮಾಡಿ ನಂತರ ಬರಪೀಡಿತ ಮೆಕ್ಕೆಜೋಳ ಮತ್ತು ರಾಗಿ ಬೆಳೆಗಳ ಪರಿಶೀಲನೆಯ ನಂತರ ಹೊನ್ನಾಳಿ ತಾಲೂಕಿನ ಸೊರಟೂರು ಮತ್ತು ಎಚ್. ಕಡದಕಟ್ಟೆ ಗ್ರಾಮದಲ್ಲಿ ಬರಪೀಡಿತ ಮೆಕ್ಕೆಜೋಳ ಬೆಳೆಗಳ ಪರಿಶೀಲನೆ ಮಾಡಿದರು.

ಪರಿಶೀಲನೆಯ ವೇಳೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ. ಎಂ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಾಹಿತ್ಯ ಎಂ. ಆಲದಕಟ್ಟಿ, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್ಲಾ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರಾಘವೇಂದ್ರ ಪ್ರಸಾದ್ ಸೇರಿದಂತೆ ಕಂದಾಯ, ಕೃಷಿ ಮತ್ತು ವಿವಿಧ ಇಲಾಖೆಯ  ಅಧಿಕಾರಿಗಳು ಹಾಗೂ ಸ್ಥಳೀಯ ರೈತರು  ಹಾಜರಿದ್ದು ಅಗತ್ಯ ಮಾಹಿತಿ ಒದಗಿಸಿದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular