ಬೆಂಗಳೂರು: ಬೆಂಗಳೂರು ನಗರದಲ್ಲಿ ಎಲ್‌ಇಡಿ ಬೀದಿ ದೀಪಗಳನ್ನು ಅಳವಡಿಸುವ ಕುರಿತು ಜಿಬಿಎ ಎಲೆಕ್ಟ್ರಿಕ್ ಎಂಜಿನಿಯರ್‌ಗಳ ಸಭೆ ನಡೆಸಿದ ಸಚಿವ ಕೃಷ್ಣಬೈರೇಗೌಡ, ನಿಮ್ಮದೇ ಇಲಾಖೆಗೆ ಕಾರ್ಯ ಪ್ರಗತಿಯ ಬಗ್ಗೆ ಪ್ರಾಥಮಿಕ ಅಂಕಿಅಂಶಗಳೂ ಇಲ್ಲದೆ ಸಭೆಗೆ ಏಕೆ ಬರುತ್ತೀರಿ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಗರದ 5 ಪಾಲಿಕೆಗಳಲ್ಲಿ ಬೀದಿ ದೀಪಗಳಿಗೆ ವಿದ್ಯುತ್ ಬಿಲ್ ಎಷ್ಟು ಪಾವತಿಸಲಾಗುತ್ತಿದೆ? ಎಲ್‌ಇಡಿ ದೀಪ ಅಳವಡಿಸಿದ ನಂತರದ ವ್ಯತ್ಯಾಸ ಎಷ್ಟು ಎಂಬ ಅಂಕಿಅಂಶ ನೀಡುವಂತೆ ಸಚಿವ ಕೃಷ್ಣ ಬೈರೇಗೌಡರು ಸಭೆಯಲ್ಲಿ ಕೋರಿದರು. ಆದರೆ ಅಧಿಕಾರಿಗಳ ಬಳಿ ಯಾವುದೇ ಅಧಿಕೃತ ಅಂಕಿಅಂಶ ಇರಲಿಲ್ಲ. ಈ ವೇಳೆ ಅಸಮಾಧಾನ ಹೊರಹಾಕಿದ ಸಚಿವರು ಬೇಸಿಕ್ ಡೇಟಾ ಇಲ್ಲ, ಪ್ರಶ್ನೆಗೆ ಉತ್ತರ ಇಲ್ಲ, ಸಭೆ ಕರೆದರೆ ಕನಿಷ್ಠ ಸಿದ್ಧತೆಯೂ ಇಲ್ಲದೆ ಮತ್ಯಾಕೆ ಬಂದಿದ್ದು? ನನ್ನ ಮುಖ ನೋಡಿಕೊಂಡು ಹೋಗಲು ಬಂದಿದ್ದೀರಾ? ಸರ್ಕಾರಿ ನೌಕರಿ ಅಂದ್ರೆ ಕೈ ಬೀಸಿಕೊಂಡು ಬರ್ಬೋದು ಹೋಗ್ಬೋದು ಎಂಬ ಧೋರಣೆ ಬೆಳೆದುಬಿಟ್ಟಿದೆ. ಅಧಿಕಾರಿಗಳ ಇಂತಹ ವರ್ತನೆಯಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಎಂದು ಗುಡುಗಿದರು.
ನಗರದ ಎಲ್‌ಇಡಿ ಬೀದಿ ದೀಪಗಳನ್ನು ಅಳವಡಿಸುವ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡರೆ ಶೇಕಡಾ 61.01% ರಷ್ಟು ವಿದ್ಯುತ್ ಉಳಿತಾಯ ಮಾಡಬಹುದು. ಆದರೆ, ಈ ಯೋಜನೆ ಕುಂಟುತ್ತಾ ಸಾಗಲು ಕಾರಣವೇನು? ಎಂದು ಅಧಿಕಾರಿಗಳ ಬಳಿ ಕೇಳಿದರು.
ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸುವ ಕುರಿತು 2025 ಮೇ 07 ಮತ್ತು 15ರಂದು ಕಾರ್ಯಾದೇಶ ನೀಡಲಾಗಿದೆ. ಯೋಜನೆಯಂತೆ ನಗರದಾದ್ಯಂತ ಒಟ್ಟು 3,02,919 ಎಲ್‌ಇಡಿ ದೀಪಗಳನ್ನು ಅಳವಡಿಸಬೇಕಿತ್ತು. ಆದರೆ ಪ್ರಸ್ತುತ 2,67,270 ದೀಪಗಳನ್ನು ಮಾತ್ರ ಅಳವಡಿಸಲಾಗಿದೆ. ಅಲ್ಲದೆ, ಒಟ್ಟು 24,677 ಸಿಸಿಎಂಎಸ್ ಪ್ಯಾನಲ್‌ಗಳನ್ನು ಅಳವಡಿಸಬೇಕಿತ್ತು. ಆದರೆ ಪ್ರಸ್ತುತ 7,567 ಪ್ಯಾನಲ್‌ಗಳನ್ನು ಮಾತ್ರ ಅಳವಡಿಸಲಾಗಿರುವುದು ಏಕೆ?ಎಂದು ಅಸಮಾಧಾನ ಹೊರಹಾಕಿದರು.
ಬೀದಿ ದೀಪಗಳು ಸರಿಯಾಗಿ ಉರಿಯುತ್ತಿಲ್ಲವೆಂಬ ನಿರಂತರ ದೂರುಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮತ್ತು ವಿದ್ಯುತ್ ಉಳಿಸುವ ಇಂಧನ ದಕ್ಷತೆಯ ಯೋಜನೆಯ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ, ಅಧಿಕಾರಿಗಳು ಸೂಕ್ತ ಸಮಯಕ್ಕೆ ಯೋಜನೆಯನ್ನು ಪೂರ್ಣಗೊಳಿಸದೆ ಬೋಗಸ್ ಅಂಕಿಅಂಶಗಳನ್ನು ನೀಡುತ್ತಿರುವುದು ಸರಿಯಲ್ಲ ಎಂದು ಸಭೆಯಲ್ಲಿ ವಿಷಾದಿಸಿದ ಅವರು, ಬಾಕಿ ಉಳಿದಿರುವ ಎಲ್ಲಾ ಎಲ್‌ಇಡಿ ದೀಪಗಳು ಮತ್ತು ಸಿಸಿಎಂಎಸ್ ಪ್ಯಾನಲ್‌ಗಳನ್ನು ಅಳವಡಿಸಲು ಆಗಸ್ಟ್ 3, 2026ರಿಂದ ಜಾರಿಗೆ ಬರುವಂತೆ ಹೆಚ್ಚುವರಿ 2 ತಿಂಗಳ ಕಾಲಾವಕಾಶ ನೀಡುವುದಾಗಿ ತಿಳಿಸಿದರು.

