ಬೆಂಗಳೂರು: ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದಂತೆ ಭೂಮಾಲೀಕರ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಇತ್ಯರ್ಥ್ಯವಾಗುವವರೆಗೂ ಭೂಸ್ವಾಧೀನ ಪಡಿಸಿಕೊಳ್ಳುವುದಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ವಡೇರಹಳ್ಳಿ ಗ್ರಾಮದಲ್ಲಿ ಬಿಡದಿ ಟೌನ್ಶಿಪ್ಗೆ ಭೂಸ್ವಾಧೀನ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಹೊಸೂರು ಗ್ರಾಮದ ಗಿರಿಜಮ್ಮ ಮತ್ತಿತರರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಆರ್. ನಟರಾಜ್ ಅವರ ಏಕಸದಸ್ಯ ಪೀಠಕ್ಕೆ ಸರ್ಕಾರ ಈ ಮಾಹಿತಿ ನೀಡಿದೆ.
ಅರ್ಜಿ ವಿಚಾರಣೆ ವೇಳೆ ಹಾಜರಿದ್ದ ಅಡ್ವೋಕೇಟ್ ಜನರಲ್ ಶಶಿಕಿರಣ ಶೆಟ್ಟಿ, ಅರ್ಜಿದಾರರಿಗೆ ಪರಿಹಾರದ ಮೊತ್ತ ನಿರ್ಧರಿಸುವವರೆಗೆ ಅರ್ಜಿದಾರರ ಜಮೀನಿಗೆ ಸಂಬಂಧಿಸಿದಂತೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ತಿಳಿಸಿದರು.
ಅರ್ಜಿದಾರರು 16 ಎಕರೆ ಸ್ವಾಧೀನ ಪ್ರಶ್ನಿಸಿದ್ದಾರೆ. ಅರ್ಜಿದಾರರು ಸೇರಿ ಹಲವು ಭೂ ಮಾಲೀಕರು ಭೂಸ್ವಾಧೀನಕ್ಕೆ ಒಪ್ಪಿದ್ದಾರೆ. ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಪರಿಹಾರವನ್ನು ನಿರ್ಧರಿಸಬೇಕಿದ್ದು, ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ವಾದ ಆಲಿಸಿದ ನ್ಯಾಯ ಪೀಠ ಕಂದಾಯ, ನಗರಾಭಿವೃದ್ಧಿ ಮತ್ತು ಅರಣ್ಯ ಇಲಾಖೆ, ಬೆಂಗಳೂರು ಮೆಟ್ರೋಪಾಲಿಟನ್ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಭೂಸ್ವಾಧೀನ ಜಿಲ್ಲಾಧಿಕಾರಿ ಮತ್ತಿತರರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

