ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಹಲವು ಶಾಸಕರು ರಾಜೀನಾಮೆಗೆ ಮುಂದಾಗಿದ್ದರೆ, ಇಂಡಿ ಶಾಸಕ ಯಶವಂತರಾಯಗೌಡ ತಮ್ಮ ಸ್ಥಾನಕ್ಕೆ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಅಲರ್ಟ್ ಆಗಿದೆ.
ಮಂತ್ರಿ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಶಾಸಕರು ರಾಜೀನಾಮೆ ಬೆದರಿಕೆ ಹಾಕುತ್ತಿದ್ದಂತೆ ಇದನ್ನು ಗಂಭೀರವಾಗಿ ಪರಿಗಣಿಸಿದ ಹೈಕಮಾಂಡ್ ನಾಯಕರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕರೆ ಮಾಡಿದ್ದು, ರಾಜೀನಾಮೆ ಬೆದರಿಕೆ ಹಾಕುತ್ತಿರುವ ಶಾಸಕರ ಮಾಹಿತಿ ಕೇಳಿದ್ದಾರೆ.
ಸಚಿವ ಸ್ಥಾನ ಸಿಗದವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡುವುದಾಗಿ ಭರವಸೆ ನೀಡಿ, ಮನವೊಲಿಸುವಂತೆ ಹೈಕಮಾಂಡ್ ನಾಯಕರು ಸೂಚಿಸಿದ್ದಾರೆ. ಒಂದು ವೇಳೆ ಇದನ್ನೂ ಮೀರಿ ರಾಜೀನಾಮೆಗೆ ನೀಡಿದರೆ ರಾಜೀನಾಮೆ ಸ್ವೀಕರಿಸಿ ಎಂದು ಖಡಕ್ ಸೂಚನೆ ನೀಡಿದ್ದಾರೆ.
ಇನ್ನೊಂದೆಡೆ ಅಸಮಾಧಾನಿತ ಶಾಸಕರು ರಾಜೀನಾಮೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರಿಗೂ ಕರೆ ಮಾಡಿರುವ ಹೈಕಮಾಂಡ್, ಅಸಮಾಧಾನಿತರ ಜೊತೆ ಮಾತನಾಡಿ ಮನವೊಲಿಸುವಂತೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

