ರಾಯಚೂರು: ಶಾಸಕ ಹಂಪನಗೌಡ ಬಾದರ್ಲಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೆಂಬಲಿಗರ ಆಕ್ರೋಶ ತೀವ್ರಗೊಂಡಿದ್ದು, ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದ್ದಾರೆ.
ರಾಯಚೂರಿನ ಸಿಂಧನೂರು ನಗರದಲ್ಲಿ ಬಾದರ್ಲಿ ಬೆಂಬಲಿಗರು, ಅಭಿಮಾನಿಗಳು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಹಂಪನಗೌಡ ಬಾದರ್ಲಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಆಗ್ರಹಿಸಿದ್ದಾರೆ. ಐದು ಬಾರಿ ಶಾಸಕರಾಗಿ ಆಯ್ಕೆಯಾದರೂ ಕಾಂಗ್ರೆಸ್ ಹೈಕಮಾಂಡ್ ಹಿರಿಯ ಸಹಸಕರನ್ನು ಕಡೆಗಣಿಸಿರುವುದು ಅನ್ಯಾಯ ಎಂದು ಕಿಡಿಕಾರಿದ್ದಾರೆ.
ರಸ್ತೆ ತಡೆ ನಡೆಸಿ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಬಾದರ್ಲಿ ಅಭಿಮಾನಿಗಳು ಮೈಮೇಲೆ ಪೆಟ್ರೋಲ್ ಸುರುದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆದಿದೆ. ಶಫುಲ್ಲಾ ಹಾಗೂ ಅಮರೇಗೌಯ್ಡ ಎಂಬ ಇಬ್ಬರು ಅಭಿಮಾನಿಗಳು ಮೈಮೇಲೆ ಪೆಟ್ರೋಲ್ ಸುರುದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಇತರರು ಅವರನ್ನು ತಡೆದು ರಕ್ಷಿಸಿದ್ದಾರೆ.
ಒಟ್ಟಾರೆ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವ ಸ್ಥಾನ ಕೈತಪ್ಪಿದವರ ಅಸಮಾಧಾನ ತೀವ್ರಗೊಂಡಿದ್ದು, ಕಾಂಗ್ರೆಸ್ ಹೈಕಮಾಂಡ್ ಗೆ ದೊಡ್ದ ತಲೆನೋವು ಆರಂಭವಾಗಿದೆ.

