ಬೆಂಗಳೂರು-ಪರಿಷ್ಕರಣೆ ಮತ್ತು ಪರಿಶೀಲನೆ ನೆಪದಲ್ಲಿ ಕಳೆದ ಐದು ತಿಂಗಳಿಂದ ರಾಜ್ಯಾದ್ಯಂತ ತಡೆಹಿಡಿದಿರುವ ವಿಕಲಚೇತನರ ಗೌರವಧನವನ್ನು ತಕ್ಷಣ ಬಿಡುಗಡೆ ಮಾಡುವಂತೆ, ಹಾಗೂ ಆಂಧ್ರಪ್ರದೇಶ ಮಾದರಿಯಲ್ಲಿ ಅದನ್ನು ಮಾಸಿಕ ಐದು ಸಾವಿರ ರೂಪಾಯಿಗೆ ಏರಿಸುವಂತೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಆಗ್ರಹಿಸಿದ್ದಾರೆ.
19 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸುಮಾರು 6,000 MRW/VRW/URW ಕಾರ್ಯಕರ್ತರಿಗೆ ಸೇವಾ ಭದ್ರತೆ ಒದಗಿಸುವಂತೆಯೂ ಅವರು ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ.
ಗೌರವಧನ ತಡೆಹಿಡಿದ ಹಿನ್ನೆಲೆಯಲ್ಲಿ ಆಕ್ರೋಶ
ಪರಿಷ್ಕರಣೆ ಅಥವಾ ಪರಿಶೀಲನೆ ನೆಪದಲ್ಲಿ ಗೌರವಧನ ತಡೆ ಹಿಡಿದಿರುವುದು ಅಕ್ಷಮ್ಯ ಮತ್ತು ಅಪರಾಧ. ಪರಿಷ್ಕರಣೆ ನಿರಂತರ ಪ್ರಕ್ರಿಯೆಯಾಗಿದ್ದು, ಆಡಳಿತದ ಲೋಪಗಳನ್ನು ಸರಿಪಡಿಸುವ ನೆಪದಲ್ಲಿ ಗೌರವಧನವನ್ನೇ ಸ್ಥಗಿತಗೊಳಿಸಿರುವುದು ದುರದೃಷ್ಟಕರ ಎಂದು ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಔಷಧಿ ಮತ್ತು ತಿಂಗಳ ಅಗತ್ಯ ವೆಚ್ಚಗಳಿಗೆ ಬಹುತೇಕ ವಿಕಲಚೇತನರು ಈ ಗೌರವಧನವನ್ನೇ ಅವಲಂಬಿಸಿದ್ದಾರೆ. ಅದನ್ನು ತಡೆಹಿಡಿದಿರುವುದು ಅವರ ದೈನಂದಿನ ಬದುಕಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಆರ್. ಅಶೋಕ ಹೇಳಿದ್ದಾರೆ.
ರಾಜ್ಯದ ನವ ಕರ್ನಾಟಕ MRW/VRW/URW ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘದ ಕಾರ್ಯಕರ್ತರು ಮತ್ತು ವಿಕಲಚೇತನರು ರಾಮನಗರ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ವಿರೋಧ ಪಕ್ಷದ ನಾಯಕನಾಗಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದ್ದೇನೆ. ಸರ್ಕಾರದ ಪರವಾಗಿ ಯಾರೊಬ್ಬರೂ ಭೇಟಿ ನೀಡಿಲ್ಲ ಎಂದು ಅವರು ಪತ್ರದಲ್ಲಿ ಟೀಕಿಸಿದ್ದಾರೆ.
ಉಪವಾಸ ನಡೆಸುತ್ತಿರುವವರ ಆರೋಗ್ಯದ ದೃಷ್ಟಿಯಿಂದ ಹಿರಿಯ ಅಧಿಕಾರಿಗಳನ್ನು ತಕ್ಷಣ ಕಳುಹಿಸಿ ಮನವಿ ಸ್ವೀಕರಿಸಿ, ಪ್ರತಿಭಟನೆ ನಿಲ್ಲಿಸಲು ಅನುವು ಮಾಡಿಕೊಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಸೇವೆ ಮತ್ತು ಸೇವಾ ಭದ್ರತೆ ಬಗ್ಗೆ ಆಗ್ರಹ
ಸೇವಾ ಭದ್ರತೆ ಕಲ್ಪಿಸಲು ಆಗ್ರಹ
MRW/VRW/URW ಕಾರ್ಯಕರ್ತರು ಗ್ರಾಮೀಣ ಮಟ್ಟದಲ್ಲಿ ಸರ್ಕಾರದ ಯೋಜನೆಗಳು ಮತ್ತು ಸೇವೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಕಳೆದ 19 ವರ್ಷಗಳ ನಿರಂತರ ಸೇವೆಯ ಬಳಿಕವೂ ಅವರಿಗೆ ಸೇವಾ ಭದ್ರತೆ ಇಲ್ಲ. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಅವರ ಸೇವೆಯನ್ನು ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ಕಾಯಂಗೊಳಿಸುವ ಸಾಧ್ಯತೆ ಪರಿಶೀಲಿಸಿ ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದು ಕೇವಲ ಗೌರವಧನ ಬಿಡುಗಡೆ ಮತ್ತು ಕಾರ್ಯಕರ್ತರ ಸೇವಾ ಭದ್ರತೆಯ ಆಡಳಿತಾತ್ಮಕ ವಿಷಯವಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರದ ಸೇವೆಗಳು ಪರಿಣಾಮಕಾರಿಯಾಗಿ ತಲುಪಲು ಅಗತ್ಯವಿರುವ ಮಾನವ ಸಂಪನ್ಮೂಲದ ವಿಷಯವೂ ಆಗಿದೆ ಎಂದು ಪತ್ರದಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ.
ಕಂದಾಯ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಪಷ್ಟ ಕಾಲಮಿತಿ ನಿಗದಿಪಡಿಸಿ ತ್ವರಿತ ಕ್ರಮಕ್ಕೆ ನಿರ್ದೇಶಿಸುವಂತೆ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ತಕ್ಷಣ ಸಭೆ ನಡೆಸಿ ಸಂಘದ ನ್ಯಾಯಯುತ ಬೇಡಿಕೆಗಳ ಕುರಿತು ನಿರ್ಧಾರ ಕೈಗೊಳ್ಳುವಂತೆ, ಹಾಗೂ ಕೈಗೊಂಡ ಕ್ರಮದ ಬಗ್ಗೆ ತಮಗೆ ಲಿಖಿತವಾಗಿ ತಿಳಿಸುವಂತೆ ಆರ್. ಅಶೋಕ ಅವರು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರದಲ್ಲಿ ಸೂಚಿಸಿದ್ದಾರೆ.
*ಪತ್ರದ ಪ್ರಮುಖ ಬೇಡಿಕೆಗಳು*
– ತಡೆಹಿಡಿದಿರುವ ಎಲ್ಲ ತಿಂಗಳುಗಳ ವಿಕಲಚೇತನರ ಗೌರವಧನ ತಕ್ಷಣ ಬಿಡುಗಡೆ
– ಗೌರವಧನವನ್ನು ಮಾಸಿಕ ₹5,000ಕ್ಕೆ ಏರಿಕೆಗೆ ಆಗ್ರಹ
– ಸುಮಾರು 6,000ದಷ್ಟಿರುವ MRW/VRW/URW ಕಾರ್ಯಕರ್ತರ ಸೇವಾ ಭದ್ರತೆ; ಇಲಾಖೆಯಲ್ಲಿ ಕಾಯಂಗೊಳಿಸುವ ಪ್ರಸ್ತಾವನೆಯನ್ನು ಸಂಪುಟಕ್ಕೆ ಸಲ್ಲಿಕೆಗೆ ಸಲಹೆ.
– ಕಂದಾಯ ಇಲಾಖೆಗೆ ಕಾಲಮಿತಿ ನಿಗದಿಗೆ ಒತ್ತಾಯ
– ಹಿರಿಯ ಅಧಿಕಾರಿಗಳು ರಾಮನಗರ ಉಪವಾಸ ಸ್ಥಳಕ್ಕೆ ಭೇಟಿ, ಮನವಿ ಸ್ವೀಕರಿಸಲು ಆಗ್ರಹ

