ಬೆಂಗಳೂರು: ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ಕಸರತ್ತಿನ ಬೆನ್ನಲ್ಲೇ ಎಐಸಿಸಿ ನೂತನ ಸಚಿವರ ಪಟ್ಟಿ ಪ್ರಕಟಿಸಿದ್ದು, ಕೊನೇ ಕ್ಷಣದಲ್ಲಿ ಕೆಲ ಬದಲಾವಣೆಗಳನ್ನು ಮಾಡಿದೆ. ಎಐಸಿಸಿ ಪ್ರಕಟಿಸಿದ ನೂತನ ಸಚಿವರ ಪಟ್ಟಿಯಲ್ಲಿ ಭಟ್ಕಳ ಶಾಸಕ ಮಂಕಾಳು ವೈದ್ಯ ಅವರ ಹೆಸರಿದ್ದರೂ ಅವರಿಗೆ ಮಂತ್ರಿ ಸ್ಥಾನ ಕೈತಪ್ಪಿದ್ದು, ಅವರ ಬದಲಾಗಿ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎಸ್.ಮಲ್ಲಿಕಾರ್ಜುನ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಇದು ಭಾರಿ ಚರ್ಚೆಗೆ ಕಾರಣವಾಗಿದೆ.
ಈ ವಿಚಾರವಾಗಿ ಎಐಸಿಸಿ ಸ್ಪಷ್ಟನೆ ನೀಡಿದ್ದು, ನೂತನ ಸಚಿವರ ಪಟ್ಟಿಯಲ್ಲಿ ಮಂಕಾಳು ವೈದ್ಯ ಹೆಸರಿರಲಿಲ್ಲ. ಇದು ಕೇವಲ ಟೈಪಿಂಗ್ ಮಿಸ್ಟೇಕ್ ಆಗಿ ಪ್ರಕಟವಾಗಿತ್ತು ಎಂದು ಸಮಜಾಅಯಿಷಿ ನೀಡಿದೆ. ಮಂಕಾಳು ವೈದ್ಯ ಅವರ ಹೆಸರಿದ್ದ ಜಾಗದಲ್ಲಿ ಈಗ ಎಸ್.ಎಸ್.ಮಲ್ಲಿಕಾರ್ಜುನ ಅವರ ಹೆಸರನ್ನು ಪ್ರಕಟಿಸಲಾಗಿದೆ.
ಎಐಸಿಸಿ ಪ್ರಕಟಿಸಿದ ಮೊದಲ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದ್ದನ್ನು ಗಮನಿಸಿದ ಎಸ್.ಎಸ್.ಮಲ್ಲಿಕಾರ್ಜುನ್, ತನಗೆ ಸಚಿವ ಸ್ಥಾನ ನೀಡದಿದ್ದರೆ ನಮ್ಮ ಇಡೀ ಕುಟುಂಬ ರಾಜೀನಾಮೆ ನೀಡುವುದಾಗಿ ಸಂದೇಶ ರವಾನಿಸಿದ್ದರು ಎನ್ನಲಾಗಿದೆ. ಶಾಸಕ ಸ್ಥಾನಕ್ಕೆ ನಾನು, ನನ್ನ ಪತ್ನಿ ಪ್ರಭಾ ಹಾಗೂ ಪುತ್ರ ಸಮರ್ಥ್ ಶಾಮನೂರು ಮೂವರೂ ರಾಜೀನಾಮೆ ಕೊಟ್ಟು ಹೊರ ನಡೆಯುವುದಾಗಿ ಹೇಳಿದ್ದಾರೆ. ಇದೇ ಕಾರಣಕ್ಕೆ ಕೊನೇ ಕ್ಷಣದಲ್ಲಿ ಮಂಕಾಳು ವೈದ್ಯ ಬದಲಾಗಿ ಎಸ್.ಎಸ್.ಮಲ್ಲಿಕಾರ್ಜುನಗೆ ಸಚಿವ ಸ್ಥಾನ ನೀಡಲಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಸಚಿವಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಮಂಕಾಳು ವೈದ್ಯ ಭೇಟಿ ನೀಡಿದ್ದಾರೆ. ಕೊನೇ ಕ್ಷಣದ ಬದಲಾವಣೆ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಲು ಬಂದಿದ್ದರು. ಆದರೆ ಡಿ.ಕೆ.ಶಿವಕುಮಾರ್ ಭೇಟಿ ಸಾಧ್ಯವಾಗಿಲ್ಲ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಕಾಂಗ್ರೆಸ್ ಶಾಸಕ ಪ್ರತಿಕ್ರಿಯೆ ನೀಡಿದ್ದು, ನಾನು ಸಿಎಂ ಅವರನ್ನ ಭೇಟಿ ಆಗಿಲ್ಲ, ಅವರು ಸಿಕ್ಕಿಲ್ಲ. ಮತ್ತೊಮ್ಮೆ ಬರುತ್ತೇನೆ ಎಂದಷ್ಟೇ ಹೇಳಿ ತೆರಳಿದ್ದಾರೆ.

