HomeLatest News'ಟಾಕ್ಸಿಕ್' ಹಾಡಿನ ದೃಶ್ಯಕ್ಕೆ ನಟಿ ಕಿಯಾರಾಗೆ ಟಾರ್ಗೆಟ್: ನೆಟ್ಟಿಗರ ವಿಕೃತ ಮನಸ್ಥಿತಿಗೆ ಹುಮಾ ಖುರೇಷಿ ಉತ್ತರ

‘ಟಾಕ್ಸಿಕ್’ ಹಾಡಿನ ದೃಶ್ಯಕ್ಕೆ ನಟಿ ಕಿಯಾರಾಗೆ ಟಾರ್ಗೆಟ್: ನೆಟ್ಟಿಗರ ವಿಕೃತ ಮನಸ್ಥಿತಿಗೆ ಹುಮಾ ಖುರೇಷಿ ಉತ್ತರ

ಚಿತ್ರರಂಗದಲ್ಲಿ ನಟ ಮತ್ತು ನಟಿಯರನ್ನು ಸಮಾಜ ನೋಡುವ ದೃಷ್ಟಿಕೋನದಲ್ಲೇ ದೊಡ್ಡ ತಾರತಮ್ಯವಿದೆ ಎಂಬುದಕ್ಕೆ ಹೊಸ ಉದಾಹರಣೆಯೊಂದು ಎದುರಾಗಿದೆ. ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ‘ತಬಾಹಿ’ ಎಂಬ ಹಾಡು ಬಿಡುಗಡೆಯಾದ ಬೆನ್ನಲ್ಲೇ, ನಟಿ ಕಿಯಾರಾ ಅಡ್ವಾಣಿ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಟ್ರೋಲಿಂಗ್‌ಗೆ ಒಳಗಾಗಿದ್ದಾರೆ. ನಟ ಯಶ್ ಹಾಗೂ ಕಿಯಾರಾ ನಡುವಿನ ರೋಮ್ಯಾಂಟಿಕ್ ದೃಶ್ಯಗಳನ್ನು ಮುನ್ನೆಲೆಗೆ ತಂದು ಕೆಲವರು ನಟಿಯ ವೈಯಕ್ತಿಕ ಜೀವನದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ.

ವಿವಾಹಿತೆ ಮತ್ತು ತಾಯಿಯಾಗಿರುವ ಕಿಯಾರಾ ಇಂತಹ ದೃಶ್ಯಗಳಲ್ಲಿ ನಟಿಸಬಾರದಿತ್ತು ಎಂದು ಕೆಲ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಆದರೆ, ಅದೇ ದೃಶ್ಯದಲ್ಲಿದ್ದ ನಟ ಯಶ್ ಕೂಡ ವಿವಾಹಿತರು ಮತ್ತು ಮಕ್ಕಳ ತಂದೆಯಾಗಿದ್ದರೂ ಅವರ ವಿರುದ್ಧ ಯಾವುದೇ ಆಕ್ಷೇಪಗಳು ವ್ಯಕ್ತವಾಗಿಲ್ಲ. ಈ ರೀತಿ ಮಹಿಳೆಯರನ್ನಷ್ಟೇ ಗುರಿಯಾಗಿಸಿ ಟ್ರೋಲ್ ಮಾಡುತ್ತಿರುವುದಕ್ಕೆ ನಟಿ ಹುಮಾ ಖುರೇಷಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಯುವಾ’ ಯೂಟ್ಯೂಬ್ ಶೋನಲ್ಲಿ ಮಾತನಾಡಿದ ಹುಮಾ ಖುರೇಷಿ, ಇಂಟರ್ನೆಟ್‌ನಲ್ಲಿ ಹರಿಯುವ ಇಂತಹ ಕಾಮೆಂಟ್‌ಗಳು ಅತ್ಯಂತ ಅಸಹ್ಯಕರ ಮತ್ತು ವಿಕೃತ ಮನಸ್ಥಿತಿಯ ಸಂಕೇತ ಎಂದಿದ್ದಾರೆ. ಸೋಷಿಯಲ್ ಮೀಡಿಯಾ ಟ್ರೋಲ್‌ಗಳಿಗೆ ಉತ್ತರ ನೀಡುತ್ತಾ ಸಮಯ ವ್ಯರ್ಥ ಮಾಡುವ ಅಗತ್ಯವಿಲ್ಲ. ಇಂತಹ ಸಣ್ಣ ಮನಸ್ಥಿತಿಯ ಜನರಿಗೆ ನಮ್ಮ ಮಾತುಗಳಿಂದ ಬುದ್ಧಿ ಕಲಿಸಲು ಸಾಧ್ಯವಿಲ್ಲ, ಬದಲಿಗೆ ಸಿನಿಮಾ ಬಿಡುಗಡೆಯಾದಾಗ ಅದಕ್ಕೆ ಸಿಗುವ ಯಶಸ್ಸೇ ಇಂತವರಿಗೆ ತಕ್ಕ ಉತ್ತರ ನೀಡಲಿದೆ ಎಂದು ಹುಮಾ ಖುರೇಷಿ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಸೈಬರ್ ದಾಳಿ ಕೇವಲ ಕಿಯಾರಾಗೆ ಮಾತ್ರ ಸೀಮಿತವಾಗಿರಲಿಲ್ಲ. ಅವರ ಪತಿ, ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲೂ ಹಲವರು ಕಿಯಾರಾ ಅವರ ನಟನೆಯನ್ನು ಪ್ರಶ್ನಿಸಿ ಕಮೆಂಟ್ ಮಾಡಿದ್ದರು. ವೃತ್ತಿಪರ ನಟನೆಯನ್ನು ವೈಯಕ್ತಿಕ ಜೀವನಕ್ಕೆ ಲಿಂಕ್ ಮಾಡಿ ನಿಂದಿಸುತ್ತಿರುವುದಕ್ಕೆ ಚಿತ್ರರಂಗದ ಹಲವರಿಂದ ಆಕ್ರೋಶ ವ್ಯಕ್ತವಾಗಿದೆ.

ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್, ಕಿಯಾರಾ ಅಡ್ವಾಣಿ ಜೊತೆಗೆ ನಯನತಾರಾ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಹಾಗೂ ಹುಮಾ ಖುರೇಷಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ‘ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಎಂಬ ಟ್ಯಾಗ್‌ಲೈನ್‌ ಹೊಂದಿರುವ ಈ ಚಿತ್ರವು ಆಗಸ್ಟ್ 26 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular