ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ಶುಭಮನ್ ಗಿಲ್ ತಮ್ಮ ಯಶಸ್ಸಿನ ಹಿಂದಿರುವ ವ್ಯಕ್ತಿಯ ಬಗ್ಗೆ ಹೃದಯಸ್ಪರ್ಶಿ ಮಾತುಗಳನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊವೊಂದರಲ್ಲಿ, ಭಾರತ ತಂಡದ ಪರ ಆಡುವ ಕನಸನ್ನು ನನಸು ಮಾಡುವಲ್ಲಿ ತಮ್ಮ ತಂದೆ ಲಖ್ವಿಂದರ್ ಸಿಂಗ್ ಗಿಲ್ ಅವರ ಪಾತ್ರವೇ ಅತ್ಯಂತ ದೊಡ್ಡದು ಎಂದು ಅವರು ಹೇಳಿದ್ದಾರೆ.
https://x.com/cricsam02/status/2083955222800744610
ಅಪ್ಪನಿಗೆ ಕ್ರಿಕೆಟ್ ಎಂದರೆ ಜೀವ
ಪಂಜಾಬಿ ಭಾಷೆಯಲ್ಲಿ ಮಾತನಾಡಿರುವ ಗಿಲ್, ಬಾಲ್ಯದಿಂದಲೇ ತಂದೆಯ ಕ್ರಿಕೆಟ್ ಮೇಲಿನ ಅಭಿಮಾನವೇ ತಮ್ಮ ಜೀವನದ ದಿಕ್ಕು ಬದಲಿಸಿತು ಎಂದು ಹೇಳಿದ್ದಾರೆ.
“ನನ್ನ ತಂದೆಗೆ ಕ್ರಿಕೆಟ್ ಎಂದರೆ ಅಪಾರ ಪ್ರೀತಿ. ಇಂದಿಗೂ ಬಿಡುವಿನ ಸಮಯ ಸಿಕ್ಕಾಗಲೆಲ್ಲ ಅವರು ಹಳ್ಳಿಯ ಉಚಿತ ಕ್ರಿಕೆಟ್ ಅಕಾಡೆಮಿಗೆ ಹೋಗಿ ಮಕ್ಕಳಿಗೆ ತರಬೇತಿ ನೀಡುತ್ತಾರೆ. ಅಲ್ಲಿಗೆ ಬರುವ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರಿಗೆ ಮಾರ್ಗದರ್ಶನ ಮಾಡುತ್ತಾರೆ. ಅವರ ಕ್ರಿಕೆಟ್ ಮೇಲಿನ ಸಮರ್ಪಣೆಯನ್ನು ನೋಡುತ್ತಲೇ ನಾನು ಬೆಳೆದಿದ್ದೇನೆ. ಅದೇ ನನಗೆ ದೊಡ್ಡ ಸ್ಫೂರ್ತಿಯಾಯಿತು” ಎಂದು ಗಿಲ್ ತಿಳಿಸಿದ್ದಾರೆ.
ತಮ್ಮ ಸಾಧನೆಯ ಹಿಂದಿರುವ ಶ್ರೇಯಸ್ಸನ್ನು ತಂದೆಗೆ ಅರ್ಪಿಸಿದ ಗಿಲ್, “ನಾನು ಇಂದು ಏನಾಗಿದ್ದೇನೆಯೋ ಅದಕ್ಕೆ ಅಪ್ಪನೇ ಕಾರಣ. ಅವರ ಪ್ರೋತ್ಸಾಹ, ಮಾರ್ಗದರ್ಶನ ಮತ್ತು ತ್ಯಾಗವಿಲ್ಲದೆ ನಾನು ಭಾರತ ತಂಡದ ಪರ ಆಡುವ ಮಟ್ಟಕ್ಕೆ ತಲುಪುತ್ತಿರಲಿಲ್ಲ. ಇಂದಿಗೂ ಅವರು ಯುವ ಪ್ರತಿಭೆಗಳನ್ನು ಬೆಳೆಸುವ ಕೆಲಸವನ್ನು ಅದೇ ಉತ್ಸಾಹದಿಂದ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಶುಭಮನ್ ಗಿಲ್ ಅವರ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ. ತಮ್ಮ ಯಶಸ್ಸಿನ ಹಿಂದೆ ತಂದೆಯ ಪಾತ್ರವನ್ನು ಗೌರವದಿಂದ ಸ್ಮರಿಸಿರುವ ಗಿಲ್ ಅವರ ಮಾತುಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಲವು ಮಂದಿ, ಪೋಷಕರ ಪ್ರೋತ್ಸಾಹ ಮತ್ತು ಮಾರ್ಗದರ್ಶನವೇ ಮಕ್ಕಳ ಸಾಧನೆಗೆ ದೊಡ್ಡ ಬಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ

