ಬೆಂಗಳೂರು: ಕೆಪಿಎಸ್‌ಸಿ ಯಲ್ಲಿ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ. 400 ಹುದ್ದೆಗಳಿಗೆ ಬರೋಬ್ಬರಿ 2 ಕೋಟಿ ರೂ. ನಂತೆ 800 ಕೋಟಿ ರೂ. ಲಂಚ ಪಡೆಯಲಾಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್.ಅಶೋಕ್, ಕೆಪಿಎಸ್‌ಸಿ ಯಲ್ಲಿ 800 ಕೋಟಿ ಡೀಲ್ ಆಗಿದೆ. ಈ ಹಗರಣದ ಬಗ್ಗೆ ಸಿಬಿಐ ತನಿಖೆ ನಡೆಯಬೇಕು. ರ‍್ಯಾಂಕ್ ಬಂದಿರೋರಿಗೆ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಕಡಿಮೆ ಅಂದ್ರೆ 350 ಮಾರ್ಕ್ಸ್ ಬಂದಿದೆ. ಆದ್ರೆ ಕಾಲೇಜುಗಳಲ್ಲಿ ಸಾಧಾರಣ ವಿದ್ಯಾರ್ಥಿ ಆಗಿದ್ದು, ಇಲ್ಲಿ ಕಾಸು ಕೊಟ್ಟವರಿಗೆ 400 ಅಂಕ ಬಂದಿದೆ. ಇದು ಹೇಗೆ ಸಾಧ್ಯ? ಹಾಗಾಗಿ ಕೆಪಿಎಸ್‌ಸಿ ಆಂತರಿಕ ತನಿಖೆ ನಡೆಸುವುದೇ ಬೇಡ, ನೇರವಾಗಿ ಸಿಬಿಐ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಕೆಪಿಎಸ್‌ಸಿ ಅಕ್ರಮಕ್ಕೆ ಅವಕಾಶ ಕೊಡಲ್ಲ ಅಂದಿದ್ರು. ಈಗ ಪಶುವೈದ್ಯಾಧಿಕಾರಿ ಹುದ್ದೆಗಳಲ್ಲಿ ಅಕ್ರಮ ಆಗಿದೆ. ಒಂದೊಂದು ಪೋಸ್ಟ್ ಗೆ 1 ರಿಂದ 2 ಕೋಟಿ ರೂ. ವಸೂಲಿ ಮಾಡಿದ್ದಾರೆ. ಈ ಬಗ್ಗೆ ಆಡಿಯೋ ಕೂಡ ವೈರಲ್ ಆಗಿದೆ. ಅದರಲ್ಲಿ ಐಎಎಸ್ ಅಧಿಕಾರಿ ಅಂತಲೂ ಪ್ರಸ್ತಾಪಿಸಲಾಗಿದೆ. ಆ ಐಎಎಸ್ ಅಧಿಕಾರಿ ಯಾರು? ಸರ್ಕಾರದ ಮಂತ್ರಿಗಳಿಗೆ ಎಷ್ಟು ಹಣ ಹೋಗುತ್ತದೆ? ಇದರ ಸಂಪೂರ್ಣ ತನಿಖೆ ಆಗಬೇಕು. ಇದುವರೆಗೆ ಪೊಲೀಸರು ಏನೂ ಕ್ರಮ ತಗೊಂಡಿಲ್ಲ, ಯಾರನ್ನೂ ಬಂಧಿಸಿಲ್ಲ ಎಂದು ಕಿಡಿಕಾರಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಎಸ್‌ಸಿ ಆಂತರಿಕ ತನಿಖೆ ಮಾಡುತ್ತಿದೆ ಎನ್ನುತ್ತಿದ್ದಾರೆ. ಲಂಚ ಪಡೆದವರೇ ತನಿಖೆ ಮಾಡಿದರೆ ಸತ್ಯ ಹೇಗೆ ಬರುತ್ತೆ? ದಾಖಲೆ ಇದ್ದರೂ ಸರ್ಕಾರ ಯಾಕೆ ತನಿಖೆ ಮಾಡ್ತಿಲ್ಲ? ರಾಹುಲ್ ಗಾಂಧಿ ಯಾಕೆ ಇದರ ಬಗ್ಗೆ ಚಕಾರ ಎತ್ತಿಲ್ಲ? ಕೆಪಿಎಸ್‌ಸಿ ಅಧ್ಯಕ್ಷರ ವಜಾ ಆಗಿದೆ, 80 ಲಕ್ಷ ರೂ.ಗೆ ದಾಖಲೆ ಇದೆ. ಯಾಕೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಬಾಯಿ ಬಿಡ್ತಿಲ್ಲ? ರಾಜ್ಯದಲ್ಲಿ ಯಾವುದೇ ಪರೀಕ್ಷಾ ಅಕ್ರಮ ಆದರೆ ಡಿಸಿ ಹೊಣೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಕೇಂದ್ರದಲ್ಲಿ ಮಂತ್ರಿ ಹೊಣೆಯಂತೆ ರಾಜ್ಯದಲ್ಲಿಯಾದರೆ ಡಿಸಿ ಹೊಣೆನಾ? ಇದು ನಿಮ್ಮ ದ್ವಂದ್ವ ನಿಲುವನ್ನು ತಿಳಿಸುತ್ತದೆಯಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

