ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಉತ್ತಮ ಬೆಂಬಲದೊಂದಿಗೆ ಮುನ್ನುಗ್ಗುತ್ತಿರುವ ‘ಲವ್ ಸೀಸನ್ಸ್’ ಸಿನಿಮಾ ಯಶಸ್ವಿ 25 ದಿನಗಳನ್ನು ಪೂರೈಸಿದೆ. ಜುಲೈ 3ರಂದು ರಾಜ್ಯಾದ್ಯಂತ ತೆರೆಕಂಡಿದ್ದ ಈ ಚಿತ್ರವು ತನ್ನ ಭಾವನಾತ್ಮಕ ಕಥಾಹಂದರ ಹಾಗೂ ಮಧುರ ಹಾಡುಗಳ ಮೂಲಕ ಚಿತ್ರಪ್ರೇಮಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಎನ್‌ಆರ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಎನ್‌ಆರ್ ಮಂಜುನಾಥ್ (ನೀಲೇರಿ) ಅವರು ಈ ಚಿತ್ರವನ್ನು ನಿರ್ಮಿಸಿದ್ದು, ಕೃತ್ವಿಕ್ ಅವರ ಬರವಣಿಗೆ ಹಾಗೂ ನಿರ್ದೇಶನದಲ್ಲಿ ಸಿನಿಮಾ ಮೂಡಿಬಂದಿದೆ. ಪ್ರೇಕ್ಷಕರ ಮನ ಮುಟ್ಟುವಂತಹ ಕಥಾವಸ್ತು ಮತ್ತು ಕಲಾವಿದರ ನೈಜ ಅಭಿನಯವೇ ಚಿತ್ರದ ಈ ಯಶಸ್ಸಿಗೆ ಕಾರಣವಾಗಿದೆ.
ಚಿತ್ರದಲ್ಲಿ ಮುಕುಂದ ರಾಮಸ್ವಾಮಿ, ದಿಯಾ ಕೀರ್ತಿ, ಚಂದನಾ ಗೌಡ ಮತ್ತು ಶ್ವೇತಾ ಕೋಗ್ಲೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರೊಂದಿಗೆ ಹಿರಿಯ ನಟರಾದ ಮಂಡ್ಯ ರಮೇಶ್, ರಾಜೇಶ್ ನಟರಂಗ, ಸಂಗೀತಾ ಅನಿಲ್, ಜಯತೀರ್ಥ, ಚೇತನ್ ದುರ್ಗಾ, ಹುಲಿ ಕಾರ್ತಿಕ್, ಸಕಲೇಶಪುರ ಸದಾನಂದ ಹಾಗೂ ಬಾಲನಟಿ ರಿತು ಸಿಂಗ್ ಅಭಿನಯಿಸಿದ್ದಾರೆ.
ಚಿತ್ರದ ತಾಂತ್ರಿಕ ಭಾಗವೂ ಬಲವಾಗಿದ್ದು, ವೀರ್ ಸಮರ್ಥ್ ಅವರ ಸಂಗೀತ ಸಂಯೋಜನೆ ಮತ್ತು ಅವಿನಾಶ್ ಶಾಸ್ತ್ರಿ ಅವರ ಛಾಯಾಗ್ರಹಣ ಚಿತ್ರದ ಮೆರುಗು ಹೆಚ್ಚಿಸಿದೆ. ಕೆ ಕಲ್ಯಾಣ್, ಪ್ರಮೋದ್ ಮರಾವಂತೆ, ಧನಂಜಯ್ ರಂಜನ್, ಸಾಯಿ ಸರ್ವೇಶ್ ಹಾಗೂ ಕ್ರಿಶ್ ಜೋಶಿ ಅವರ ಸಾಹಿತ್ಯದ ಹಾಡುಗಳು ಕೇಳುಗರ ಗಮನ ಸೆಳೆದಿವೆ. ಮಧು ತುಂಬಕೆರೆ ಅವರ ಸಂಕಲನ ಮತ್ತು ಭಜರಂಗಿ ಮೋಹನ್ ಅವರ ನೃತ್ಯ ನಿರ್ದೇಶನ ಚಿತ್ರಕ್ಕೆ ಸಾಥ್ ನೀಡಿದೆ.

