ಹತ್ಯೆಯನ್ನು ಸಹಜ ಸಾವು ಎಂದು ಬಿಂಬಿಸಲು ಆರೋಪಿಗಳು ನಡೆಸಿದ ನಾಟಕವನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತೆಯ ನಾದಿನಿಯರು ಹಾಗೂ ಅತ್ತೆ ಸೇರಿದಂತೆ ಒಟ್ಟು ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾಳೆ ಎಂದು ಕಕ್ಷ
ಪೊಲೀಸರ ಪ್ರಕಾರ, ತಮಿಳುನಾಡಿನ ಪುದುಕ್ಕೋಟೈ ಜಿಲ್ಲೆಯ ಮೇಲುಪಟ್ಟಿ ಇಂದಿರಾನಗರ ಪ್ರದೇಶದ ಪಾಂಡಿದುರೈ ರಸ್ತೆ ಕಾಮಗಾರಿಗಳ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದಾನೆ. ಕೆಲ ತಿಂಗಳ ಹಿಂದೆ ಈತನಿಗೆ 21 ವರ್ಷದ ಸಂಧ್ಯಾ ಎಂಬ ಯುವತಿಯೊಂದಿಗೆ ವಿವಾಹವಾಗಿತ್ತು. ಪ್ರಸ್ತುತ ಸಂಧ್ಯಾ ಆರು ತಿಂಗಳ ಗರ್ಭಿಣಿಯಾಗಿದ್ದರು.
ಪಾಂಡಿದುರೈ ಅವರ ಸಹೋದರಿಯರಾದ ಮೀನಾ ಹಾಗೂ ಪೌರ್ನಾಡಿ ತಮ್ಮ ಪತಿಯರೊಂದಿಗೆ ಭಿನ್ನಾಭಿಪ್ರಾಯ ಉಂಟಾದ ಹಿನ್ನೆಲೆಯಲ್ಲಿ ತವರು ಮನೆಗೆ ಬಂದು ಸಹೋದರನ ಮನೆಯಲ್ಲೇ ವಾಸಿಸುತ್ತಿದ್ದರು. ಈ ವೇಳೆ ಇಬ್ಬರೂ ಪ್ರತ್ಯೇಕ ಯುವಕರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ತಮ್ಮ ಮನೆಯಲ್ಲೇ ನಡೆಯುತ್ತಿದ್ದ ಈ ವಿಚಾರವನ್ನು ಗಮನಿಸಿದ ಸಂಧ್ಯಾ ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅವರ ವರ್ತನೆಯಿಂದ ಕುಟುಂಬದ ಗೌರವಕ್ಕೆ ಧಕ್ಕೆ ಬರುತ್ತಿದೆ ಎಂದು ಭಾವಿಸಿ, ಈ ವಿಷಯವನ್ನು ಪತಿ ಪಾಂಡಿದುರೈ ಅವರ ಗಮನಕ್ಕೆ ತಂದಿದ್ದರು.
ಇದರಿಂದ ಪಾಂಡಿದುರೈ ತನ್ನ ಸಹೋದರಿಯರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದಾದ ಬಳಿಕ ಸಂಧ್ಯಾ ತಮ್ಮ ವೈಯಕ್ತಿಕ ವಿಚಾರಗಳಿಗೆ ಹಾಗೂ ಅಕ್ರಮ ಸಂಬಂಧಗಳಿಗೆ ಅಡ್ಡಿಯಾಗುತ್ತಿದ್ದಾರೆ ಎಂದು ಭಾವಿಸಿದ ಮೀನಾ ಮತ್ತು ಪೌರ್ನಾಡಿ, ಆಕೆಯ ಮೇಲೆ ದ್ವೇಷ ಬೆಳೆಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯಲ್ಲಿ ಒಬ್ಬಳೇ ಇದ್ದಾಗ ದಾಳಿ
ಸಂಧ್ಯಾಳನ್ನು ಹೇಗಾದರೂ ಕೊಲೆ ಮಾಡಬೇಕೆಂದು ಆರೋಪಿಗಳು ಸಂಚು ರೂಪಿಸಿದ್ದರು. ಈ ನಡುವೆ ಪಾಂಡಿದುರೈ ಕೆಲಸದ ನಿಮಿತ್ತ ಈರೋಡ್‌ಗೆ ತೆರಳಿದ್ದರು. ಮನೆಯಲ್ಲಿ ಸಂಧ್ಯಾ ಒಬ್ಬಳೇ ಇದ್ದ ಸಮಯವನ್ನು ಆರೋಪಿಗಳು ಬಳಸಿಕೊಂಡಿದ್ದಾರೆ.
ಕಳೆದ ತಿಂಗಳ 30ರಂದು ಮುಂಜಾನೆ ನಿದ್ರಿಸುತ್ತಿದ್ದ ಸಂಧ್ಯಾ ಮೇಲೆ ಮೀನಾ ಮತ್ತು ಪೌರ್ನಾಡಿ ಸೇರಿದಂತೆ ಆರೋಪಿಗಳು ದಾಳಿ ನಡೆಸಿದ್ದಾರೆ. ಆಕೆಯ ಕುತ್ತಿಗೆಗೆ ದುಪಟ್ಟಾ ಬಿಗಿದು, ದಿಂಬಿನಿಂದ ಮುಖವನ್ನು ಒತ್ತಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಯನ್ನು ಮುಚ್ಚಿಹಾಕಲು ನಾಟಕ
ಹತ್ಯೆಯ ಬಳಿಕ ಪ್ರಕರಣವನ್ನು ಸಹಜ ಸಾವು ಎಂದು ಬಿಂಬಿಸಲು ಆರೋಪಿಗಳು ಪ್ರಯತ್ನಿಸಿದ್ದಾರೆ. ಸಂಧ್ಯಾಳ ಬಾಯಿ ಹಾಗೂ ಮೂಗಿನಲ್ಲಿ ಹಾಲು ಸುರಿದು, ಬ್ರೆಡ್ ತುಂಡುಗಳನ್ನು ಬಾಯಿಯಲ್ಲಿ ಸಿಕ್ಕಿಸಿದ್ದಾರೆ.
ಬೆಳಗ್ಗೆ ಬ್ರೆಡ್ ತಿನ್ನುವಾಗ ಅದು ಗಂಟಲಿನಲ್ಲಿ ಸಿಲುಕಿ ಬಿಕ್ಕಳಿಕೆ ಉಂಟಾಗಿ, ಬಳಿಕ ಆಕೆ ಪ್ರಜ್ಞಾಹೀನಳಾಗಿದ್ದಾಳೆ ಎಂದು ಸ್ಥಳೀಯರು ಹಾಗೂ ಸಂಬಂಧಿಕರನ್ನು ನಂಬಿಸಲು ಪ್ರಯತ್ನಿಸಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾಳೆ ಎಂದು ಕಥೆ ಕಟ್ಟಿದ್ದಾರೆ.
ಆದರೆ ಸಂಧ್ಯಾ ಅನುಮಾನಾಸ್ಪದವಾಗಿ ಮೃತಪಟ್ಟಿರುವುದನ್ನು ಗಮನಿಸಿದ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಮರಣೋತ್ತರ ಪರೀಕ್ಷೆಯಿಂದ ಸತ್ಯ ಬಯಲು
ಘಟನಾ ಸ್ಥಳಕ್ಕೆ ತೆರಳಿದ ಗಣೇಶ್ ನಗರ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸಂಧ್ಯಾ ಉಸಿರುಗಟ್ಟಿಸಿ, ಕುತ್ತಿಗೆ ಬಿಗಿದ ಪರಿಣಾಮ ಮೃತಪಟ್ಟಿರುವುದು ಬಹಿರಂಗವಾಗಿದೆ.
ಇದರಿಂದ ಅನುಮಾನಗೊಂಡ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣದ ನಿಜಾಂಶ ಹೊರಬಂದಿದೆ. ವಿಚಾರಣೆ ವೇಳೆ ಆರೋಪಿಗಳು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೀನಾ, ಪೌರ್ನಾಡಿ ಸೇರಿದಂತೆ ಕೃತ್ಯಕ್ಕೆ ಸಹಕರಿಸಿದ ಇತರ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.ಆರು ತಿಂಗಳ ಗರ್ಭಿಣಿಯಾಗಿದ್ದ ಮಹಿಳೆಯನ್ನು ಈ ರೀತಿ ಹತ್ಯೆ ಮಾಡಿರುವ ಘಟನೆ ಸ್ಥಳೀಯವಾಗಿ ತೀವ್ರ ಸಂಚಲನ ಮೂಡಿಸಿದೆ.

