ವಾರಣಾಸಿ- ತರಗತಿಯಲ್ಲಿ ಆಕಸ್ಮಿಕವಾಗಿ ಪ್ಯಾಂಟ್‌ನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಕ್ಕಾಗಿ 5 ವರ್ಷದ ಕಂದಮ್ಮನ ಮೇಲೆ ಶಿಕ್ಷಕಿಯೊಬ್ಬರು ಅಮಾನವೀಯವಾಗಿ ಹಲ್ಲೆ ನಡೆಸಿ, ಬಿಸಿ ಚಾಕುವಿನಿಂದ ಆತನ ಖಾಸಗಿ ಭಾಗಗಳನ್ನು ಸುಟ್ಟುಹಾಕಿ ವಿಕೃತಿ ಮೆರೆದಿರುವ ದಾರುಣ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಬೆಳಕಿಗೆ ಬಂದಿದೆ.
ವಾರಣಾಸಿಯ ‘ಸೆರೆನ್ ಸೋನಿ ಪ್ಲೇ ಸ್ಕೂಲ್’ನಲ್ಲಿ ಈ ಭೀಕರ ಘಟನೆ ನಡೆದಿದೆ. ವಕೀಲರೊಬ್ಬರ 5 ವರ್ಷದ ಮಗುವೇ ಈ ಅಕ್ರಮಣಕ್ಕೆ ಬಲಿಯಾದ ದುರ್ದೈವಿ ವಿದ್ಯಾರ್ಥಿ. ಜುಲೈ 24 ರಂದು ಮಗು ತರಗತಿಯಲ್ಲಿ ಶೌಚಾಲಯಕ್ಕೆ ಹೋಗಲು ಅನುಮತಿ ಕೋರಿತ್ತು. ಆದರೆ ಶಿಕ್ಷಕಿ ಅನುಮತಿ ನೀಡಲು ನಿರಾಕರಿಸಿದ ಕಾರಣ, ಕಂದಮ್ಮ ನಿಯಂತ್ರಣ ಕಳೆದುಕೊಂಡು ಪ್ಯಾಂಟ್‌ನಲ್ಲಿಯೇ ಮೂತ್ರ ವಿಸರ್ಜನೆ ಮಾಡಿಕೊಂಡಿತ್ತು.
ಕೋಪಗೊಂಡ ನಿರ್ದಯಿ ಶಿಕ್ಷಕಿ ಮಗುವನ್ನು ಮತ್ತೊಂದು ಕೊಠಡಿಗೆ ಎಳೆದುಕೊಂಡು ಹೋಗಿ, ಗ್ಯಾಸ್ ಸ್ಟೌವ್‌ನಲ್ಲಿ ಚಾಕುವನ್ನು ಕಾಯಿಸಿ ಮಗುವಿನ ಖಾಸಗಿ ಭಾಗಗಳನ್ನು ಸುಟ್ಟಿದ್ದಾರೆ. ಅಷ್ಟೇ ಅಲ್ಲದೆ, ಮಗುವಿನ ಮೇಲೆ ಹಲ್ಲೆ ನಡೆಸಿ, ಈ ಕುರಿತು ಮನೆಯಲ್ಲಿ ಬಾಯ್ದಿಟ್ಟರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಪೋಷಕರ ಪ್ರತಿಕ್ರಿಯೆ ಮತ್ತು ಶಾಲಾ ಆಡಳಿತದ ನಿರ್ಲಕ್ಷ್ಯ
ಶಾಲೆ ಮುಗಿಸಿ ಮನೆಗೆ ಮರಳಿದ ಮಗು ತೀವ್ರ ಆಘಾತಕ್ಕೊಳಗಾಗಿ, ಕಣ್ಣೀರು ಹಾಕುತ್ತಾ ತನ್ನ ಮೇಲಾದ ರಾಕ್ಷಸೀ ಕೃತ್ಯವನ್ನು ಪೋಷಕರಿಗೆ ವಿವರಿಸಿದೆ. ತಕ್ಷಣವೇ ಪೋಷಕರು ಶಿಕ್ಷಕಿಯನ್ನು ಸಂಪರ್ಕಿಸಲು ಯತ್ನಿಸಿದರೂ ಅವರು ಕರೆ ಸ್ವೀಕರಿಸಿಲ್ಲ.
ಪ್ರಾಂಶುಪಾಲರಾದ ಹೇಮಲತಾ ಸಿಂಗ್ ಅವರನ್ನು ಸಂಪರ್ಕಿಸಿದಾಗ, ಅವರು ಯಾವುದೇ ಸ್ಪಷ್ಟನೆ ನೀಡದೆ ಪೋಷಕರಿಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮರುದಿನ ಶಾಲೆಗೆ ತೆರಳಿದ ಪೋಷಕರಿಗೆ ಆಡಳಿತ ಮಂಡಳಿಯಿಂದ ಯಾವುದೇ ರೀತಿಯ ಸಹಕಾರ ಸಿಗಲಿಲ್ಲ.
ಪೊಲೀಸ್ ತನಿಖೆ
ಎಫ್‌ಐಆರ್ ದಾಖಲು, ತನಿಖೆ ಆರಂಭ
ಮಗುವಿನ ದೇಹದ ಮೇಲಿನ ಗಾಯಗಳು ಮತ್ತು ಆಘಾತವನ್ನು ಕಂಡು ಬೆಚ್ಚಿಬಿದ್ದ ಪೋಷಕರು ಕೂಡಲೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿ ಅತುಲ್ ಸಿಂಗ್, “ಮಗುವಿನ ತಂದೆ ಸಲ್ಲಿಸಿದ ದೂರಿನ ಆಧಾರದ ಮೇಲೆ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸರು ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಶೀಘ್ರವೇ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
ಮಕ್ಕಳ ಸುರಕ್ಷತೆಗೆ ಕಠಿಣ ಕ್ರಮದ ಒತ್ತಾಯ
ಶಿಕ್ಷಣ ದೇಗುಲಗಳೆಂದು ನಂಬಲಾಗಿರುವ ಪ್ಲೇಸ್ಕೂಲ್ ಮತ್ತು ಶಾಲೆಗಳಲ್ಲಿ ಕಂದಮ್ಮಗಳಿಗೆ ಸಿಗಬೇಕಾದ ರಕ್ಷಣೆ ಮರೀಚಿಕೆಯಾಗುತ್ತಿರುವುದಕ್ಕೆ ಈ ಘಟನೆ ಕನ್ನಡಿಯಾಗಿದೆ. ಪುಟ್ಟ ಮಕ್ಕಳ ಮನೋಭಾವವನ್ನು ಅರ್ಥಮಾಡಿಕೊಳ್ಳದೆ ರಾಕ್ಷಸೀಯವಾಗಿ ವರ್ತಿಸುತ್ತಿರುವ ಇಂತಹ ಶಿಕ್ಷಕರ ವಿರುದ್ಧ ಕಠಿಣಾತಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗೂ ಎಲ್ಲಾ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಲು ಕಠಿಣ ಮಾರ್ಗಸೂಚಿಗಳನ್ನು ಕಡ್ಡಾಯಗೊಳಿಸಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

