ನವದೆಹಲಿ: ದೇಶಾದ್ಯಂತ ಭಾರಿ ಚರ್ಚೆಯಾಗುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳನ್ನು ಸಂಪೂರ್ಣವಾಗಿ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಸಾರ್ವಜನಿಕ ಪರೀಕ್ಷೆಗಳಲ್ಲಿ ಪಾರದರ್ಶಕತೆ ಹಾಗೂ ನಂಬಿಕೆಯನ್ನು ಮರುಸ್ಥಾಪಿಸುವ ಉದ್ದೇಶದಿಂದ ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ಮಸೂದೆ 2026’ ಅನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು.
ವಿಪಕ್ಷಗಳ ಗದ್ದಲದ ನಡುವೆಯೇ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಲೋಕಸಭೆಯಲ್ಲಿ ಪರೀಕ್ಷಾ ತಿದ್ದುಪಡಿ ಮಸೂದೆ ಮಂಡಿಸಿದರು.
ಆದರೆ ವಿಪಕ್ಷಗಳು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಶಾಂತಿಯುತ ಪ್ರತಿಭಟನೆಯ ವೇಳೆ ಪೊಲೀಸರು ವಿದ್ಯಾಅರ್ಥಿಗಳ ಮೇಲೆ ಲಾಠಿಚಾರ್ಜ್, ಪೆಲೆಟ್ ಗನ್ ದಾಳಿ ನಡೆಸಿದ್ದನ್ನು ಖಂಡಿಸಿ ಸದನದಲ್ಲಿ ಆಕ್ರೋಶ ವ್ಯಕ್ತಪಡಿಸಿದವು. ಈ ಬಗ್ಗೆ ಗೃಹ ಸಚಿವ ಅಮಿತ್ ಶಾ ಸದನದಲ್ಲಿ ಉತ್ತರ ನೀಡುವಂತೆ ಆಗ್ರಹಿಸಿ ಗದ್ದಲವೆಬ್ಬಿಸಿದವು. ಆದರೆ ಸ್ಪೀಕರ್ ಓಂ ಬಿರ್ಲಾ, ಪರೀಕ್ಷಾ ಅಕ್ರಮ ತಡೆ ಬಗ್ಗೆ ಮಸೂದೆ ಮಂಡಿಸಲಾಗುವುದು. ಕಲಾಪ ಗದ್ದಲಗಳಲ್ಲಿಯೇ ವ್ಯರ್ಥವಾಗಬಾರದು ಎಂದು ಹೇಳಿ ಮಸೂದೆ ಮಂಡನೆಗೆ ಸಚಿವರಿಗೆ ಸೂಚಿಸಿದರು.
ಆದಾಗ್ಯೂ ವಿಪಕ್ಷ ಸದಸ್ಯರು ಮಕ್ಕಳ ಮೇಲಿನ ಲಾಠಿಚಾರ್ಜ್ ಗೆ ಅಮಿತ್ ಶಾ ಉತ್ತರ ಕೊಡಲೇಬೇಕು ಎಂದು ಒತ್ತಾಯಿಸಿ ಬಿಗಿಪಟ್ಟು ಹಿಡಿದವು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಗದ್ದಲ ಮುಂದುವರೆಸಿದರು. ವಿಪಕ್ಷಗಳ ಗದ್ದಲದ ನಡುವೆಯೂ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಪರೀಕ್ಷಾ ಅಕ್ರಮ ತಡೆ ಮಸೂದೆ ಮಂಡಿಸಿದರು.
ಮಸೂದೆಯಿಂದಾಗುವ ಪ್ರಯೋಜನ ಹಾಗೂ ವಿದ್ಯಾರ್ಥಿಗಳಿಗೆ ಯಾವ ರೀತಿ ಸಹಕಾರಿಯಾಗಲಿದೆ ಎಂಬಿತ್ಯಾದಿ ವಿಚಾರದ ಬಗ್ಗೆ ಸದನದಲ್ಲಿ ಚರ್ಚೆ ನಡೆಸಲಾಗುವುದು. ಮಸೂದೆ ಬಗ್ಗೆ ಚರ್ಚಿಸುವ ನಿಟ್ಟಿನಲ್ಲಿ ಸ್ಪೀಕರ್ ಓಂ ಬಿರ್ಲಾ ಲೋಕಸಭಾ ಕಲಾಪವನ್ನು ಮಧ್ಯಾಹ್ನ 2 ಗಂಟೆವರೆಗೆ ಮುಂದೂಡಿದರು.
ಮಸೂದೆಯಲ್ಲಿರುವ ಕಠಿಣ ಕ್ರಮಗಳು:
ಪರೀಕ್ಷೆಗಳಲ್ಲಿ ಅಕ್ರಮ ಎಸಗುವ ವ್ಯಕ್ತಿಗಳಿಗೆ 5 ರಿಂದ 10 ವರ್ಷಗಳ ಜೈಲು ಶಿಕ್ಷೆ ಹಾಗೂ ಸಂಘಟಿತ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದವರಿಗೆ 10 ವರ್ಷ ಜೈಲು ಶಿಕ್ಷೆ ಮತ್ತು 10 ಕೋಟಿ ರೂ.ವರೆಗೆ ದಂಡ ವಿಧಿಸಲು ತಿದ್ದುಪಡಿ ತರಲಾಯಿತು. ಪತ್ರಿಕೆ ಸೋರಿಕೆಯಲ್ಲಿ ಯಾವುದೇ ಕೋಚಿಂಗ್ ಸೆಂಟರ್‌ಗಳು ಅಥವಾ ತರಬೇತಿ ಸಂಸ್ಥೆಗಳು ಭಾಗಿಯಾಗಿರುವುದು ಸಾಬೀತಾದರೆ ಅವುಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಪರೀಕ್ಷೆ ನಡೆಸುವ ಕಂಪನಿಗಳು ತಪ್ಪಿತಸ್ಥರೆಂದು ಕಂಡುಬಂದರೆ ಅವುಗಳನ್ನು 8 ವರ್ಷಗಳ ಕಾಲ ಕಪ್ಪುಪಟ್ಟಿಗೆ ಸೇರಿಸಲಾಗುವುದು ಹಾಗೂ ಕಂಪನಿಯ ಹಿರಿಯ ಆಡಳಿತ ಮಂಡಳಿ ಮತ್ತು ನಿರ್ದೇಶಕರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲು ನಿರ್ಧರಿಸಲಾಯಿತು. ಪ್ರಕರಣಗಳ ತನಿಖೆಯನ್ನು 2 ತಿಂಗಳೊಳಗೆ ಪೂರ್ಣಗೊಳಿಸುವುದು ಹಾಗೂ ಫಾಸ್ಟ್-ಟ್ರ್ಯಾಕ್ ನ್ಯಾಯಾಲಯಗಳ ಮೂಲಕ ದೈನಂದಿನ ವಿಚಾರಣೆ ನಡೆಸಿ, ಆರೋಪಪಟ್ಟಿ ಸಲ್ಲಿಕೆಯಾದ 3 ತಿಂಗಳೊಳಗೆ ತೀರ್ಪು ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.

