ಬೆಂಗಳೂರು : ರಾಜ್ಯದಲ್ಲಿ ಬಾಲ್ಯ ವಿವಾಹಗಳನ್ನು ಸಂಪೂರ್ಣವಾಗಿ ತಡೆಯುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (KSCPCR) ಮಹತ್ವದ ಹೆಜ್ಜೆ ಇಟ್ಟಿದೆ. ವಿವಾಹ ನೋಂದಣಿ ಸಮಯದಲ್ಲಿ ವಯಸ್ಸಿನ ಸರಿಯಾದ ಪರಿಶೀಲನೆ ನಡೆಸಬೇಕು ಹಾಗೂ ಕೇವಲ ಆಧಾರ್ ಕಾರ್ಡ್ ಅನ್ನು ವಯಸ್ಸಿನ ಅಂತಿಮ ಪುರಾವೆಯಾಗಿ ಪರಿಗಣಿಸಬಾರದು ಎಂದು ಆಯೋಗವು ಸರ್ಕಾರಕ್ಕೆ ಮನವಿ ಮಾಡಿದೆ.ಬಾಲ್ಯ ವಿವಾಹ ನಿಷೇಧ (ಕರ್ನಾಟಕ) ನಿಯಮಗಳು 2014 ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿರುವ ಆಯೋಗ, ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕ ಆಯುಕ್ತರಿಗೆ ಈ ಕುರಿತು ಅಧಿಕೃತ ಪತ್ರ ಬರೆದಿದೆ.
ಶಾಲಾ ದಾಖಲೆ, ಜನನ ಪ್ರಮಾಣಪತ್ರ ಕಡ್ಡಾಯಗೊಳಿಸಲು ಮನವಿ
ವಿವಾಹ ನೋಂದಣಿ ವೇಳೆ ಕೇವಲ ಆಧಾರ್ ಕಾರ್ಡ್ ಅನ್ನು ಮಾತ್ರ ವಯಸ್ಸಿನ ಪುರಾವೆಯಾಗಿ ಸ್ವೀಕರಿಸುವುದರಿಂದ ಅಪ್ರಾಪ್ತರ ವಿವಾಹಗಳು ನೋಂದಣಿಯಾಗುವ ಅಪಾಯ ಹೆಚ್ಚಿರುತ್ತದೆ ಎಂದು ಆಯೋಗ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ, ಮದುವೆ ನೋಂದಣಿ ಅಧಿಕಾರಿಗಳು ವಯಸ್ಸಿನ ದೃಢೀಕರಣಕ್ಕಾಗಿ ಆಧಾರ್ ಬದಲಿಗೆ ಈ ಕೆಳಗಿನ ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ಎಂದು ಕೋರಲಾಗಿದೆ:
ಜನನ ಪ್ರಮಾಣ ಪತ್ರ (Birth Certificate)
ಶಾಲಾ ದಾಖಲೆಗಳು / ಎಸ್ಎಸ್ಎಲ್ಸಿ ಅಂಕಪಟ್ಟಿ (SSLC Marks Card)
ಅಗತ್ಯವಿದ್ದಲ್ಲಿ ಅಧಿಕೃತ ವೈದ್ಯಕೀಯ ಪ್ರಮಾಣ ಪತ್ರ (Medical Certificate)
“ಆಧಾರ್ ಗುರುತಿನ ಚೀಟಿ ಮಾತ್ರ, ವಯಸ್ಸಿನ ಅಂತಿಮ ದಾಖಲೆಯಲ್ಲ
ಆಯೋಗದ ಪರವಾಗಿ ಮನವಿ ಸಲ್ಲಿಸಿದ ಮಾಜಿ ಸದಸ್ಯ ಕೆ.ಟಿ. ತಿಪ್ಪೇಸ್ವಾಮಿ ಮಾತನಾಡಿ, “ಆಧಾರ್ ಕಾರ್ಡ್ ಮೂಲತಃ ವ್ಯಕ್ತಿಯ ಗುರುತಿನ ದಾಖಲೆಯಾಗಿದೆಯೇ ಹೊರತು, ವಯಸ್ಸಿನ ಪರಿಪೂರ್ಣ ಪುರಾವೆಯಲ್ಲ. ಆಧಾರ್ನಲ್ಲಿರುವ ಜನನ ದಿನಾಂಕವು ಸ್ವಯಂ ಘೋಷಣೆ ಅಥವಾ ಸಾಮಾನ್ಯ ದಾಖಲೆಗಳ ಮೇಲೆ ಆಧಾರಿತವಾಗಿರಬಹುದು. ಹೀಗಾಗಿ ಮದುವೆ ನೋಂದಣಿ ಅಧಿಕಾರಿಗಳು ಆಧಾರ್ ಮೇಲೆ ಮಾತ್ರ ಅವಲಂಬಿತರಾಗಬಾರದು” ಎಂದು ವಿವರಿಸಿದ್ದಾರೆ.
ಜಾಗೃತಿ ಮತ್ತು ಕಠಿಣ ಕ್ರಮಕ್ಕೆ ಆಗ್ರಹ
ಬಾಲ್ಯವಿವಾಹವನ್ನು ತಡೆಯುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಉಲ್ಲಂಘಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ನೋಂದಣಿ ಸಿಬ್ಬಂದಿಗೆ ಈ ವಿಷಯ ಕುರಿತು ಸೂಕ್ತ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಆಯೋಗವು ಸರ್ಕಾರವನ್ನು ಆಗ್ರಹಿಸಿದೆ.

