ಬೆಂಗಳೂರು: ಬೆಂಗಳೂರಿನ ಉತ್ತರ ಪಾಲಿಕೆ ವ್ಯಾಪ್ತಿಯಲ್ಲಿ ಕಸದ ಬ್ಲಾಕ್ ಸ್ಪಾಟ್ ತೆರವುಗೊಳಿಸಿದ ಸ್ಥಳದಲ್ಲಿ ಪುನಃ ಕಸ ಎಸೆದ ನಾಲ್ವರ ವಿರುದ್ಧ ಕೇಸ್ ದಾಖಲಿಸಲಾಗಿದೆ.
ರೋಷನ್, ಕಾಮರಾಜ್, ರುದ್ರ ಮತ್ತು ಮಣಿ ಕಸ ಎಸೆದ ಆರೋಪಿಗಳು. ಸರ್ವಜ್ಞನಗರ ವಿಭಾಗದ ವಾರ್ಡ್ ಸಂಖ್ಯೆ 27ರ ಬಾಣಸವಾಡಿ 7ನೇ ಮುಖ್ಯರಸ್ತೆಯಲ್ಲಿದ್ದ ಕಸದ ಬ್ಲಾಕ್ ಸ್ಪಾಟ್ ಅನ್ನು ಇತ್ತೀಚಿಗೆ ತೆರವುಗೊಳಿಸಿ ಸೌಂದರ್ಯೀಕರಣ ಕಾಮಗಾರಿ ಕೈಗೊಳ್ಳಲಾಗಿದೆ.
ನಂತರದಲ್ಲಿ ಸ್ಥಳದಲ್ಲಿ ಕಣ್ಗಾವಲಿಗಾಗಿ ಮಾರ್ಷಲ್ ಗಳನ್ನು ನಿಯೋಜಿಸಲಾಗಿದೆ. ಜುಲೈ 16ರಂದು ರಾತ್ರಿ ಪಾಳಿಯಲ್ಲಿ ಮಾರ್ಷಲ್ ಗಳು ಕಾರ್ಯ ನಿರ್ವಹಿಸುತ್ತಿದ್ದರು. ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆಯುತ್ತಿರುವವರನ್ನು ತಡೆದು ದಂಡ ವಿಧಿಸಲು ಮುಂದಾಗಿದ್ದಾರೆ. ಆದರೆ ಸಂಬಂಧಿಸಿದ ನಾಲ್ವರು ಮತ್ತೆ ಅದೇ ಸ್ಥಳದಲ್ಲಿ ಕಸ ಎಸೆಯುತಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮದ ಸರ್ವಜ್ಞ ನಗರ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕರು ಬಾಣಸವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕೇಸ್ ದಾಖಲಾಗಿದೆ ಎನ್ನಲಾಗಿದೆ.
ಚಿತ್ರಕೃಪೆ: ಎಐ

