ಬೆಂಗಳೂರು: ರಾಜ್ಯದಲ್ಲಿ ಅರಣ್ಯ ಸಫಾರಿ ದರವನ್ನು ಶೇಕಡ 40ರಷ್ಟು ಏರಿಕೆ ಮಾಡಲಾಗಿದೆ. ಬಂಡೀಪುರ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಂದು ಬಾರಿ ಸಫಾರಿಗೆ ಇದ್ದ 600 ರೂಪಾಯಿ ದರವನ್ನು 1 ಸಾವಿರ ರೂಪಾಯಿಗೆ ಹೆಚ್ಚಳ ಮಾಡಲಾಗಿದ್ದು, ಸೆ.1 ರಿಂದ ಹೊಸ ದರಗಳು ಜಾರಿಯಾಗಲಿವೆ ಎಂದು ನಾಗರಹೊಳೆ ಹುಲಿ ಯೋಜನಾ ನಿರ್ದೇಶಕರಾದ ಪಿ.ಎ.ಸೀಮಾ ತಿಳಿಸಿದ್ದಾರೆ.
ರಾಜ್ಯದಲ್ಲಿ ಸದ್ಯ ನಾಗರಹೊಳೆಯಲ್ಲಿ ಮೂರು, ಬಂಡಿಪುರದಲ್ಲಿ ಒಂದು, ಮಲೈ ಮಹದೇಶ್ವರ ವನ್ಯಧಾಮ, ಬಿ.ಆರ್.ಟಿ. ಭದ್ರಾ ಮತ್ತು ಆಣಶಿಯಲ್ಲಿ ತಲಾ ಒಂದು ಕಡೆ ಸಫಾರಿ ವ್ಯವಸ್ಥೆ ಇದೆ. ಕಳೆದ ವರ್ಷ ಕೂಡ ಸಫಾರಿ ದರ ಏರಿಕೆ ಮಾಡಲಾಗಿತ್ತು. ಈ ಬಾರಿ ಇಂಧನ ದರ ಏರಿಕೆ ಕಾರಣದಿಂದ ಶೇಕಡ 40ರಷ್ಟು ದರ ಹೆಚ್ಚಳ ಮಾಡಲಾಗಿದೆ. ಬಂಡಿಪುರ ಮತ್ತು ನಾಗರಹೊಳೆಯಲ್ಲಿ ಮಾತ್ರ ಈಗ ದರ ಹೆಚ್ಚಳ ಜಾರಿಯಾಗಲಿದ್ದು, ಮುಂದಿನ ದಿನಗಳಲ್ಲಿ ಉಳಿದ ಕಡೆಯಿಂದ ಪ್ರಸ್ತಾವನೆ ಬಂದರೆ ದರ ಹೆಚ್ಚಳ ಮಾಡಲಾಗುವುದು ಎಂದು ಹೇಳಲಾಗಿದೆ.

