ಮಾಸ್ಕೋ: ಸಾಮಾಜಿಕ ಜಾಲತಾಣಗಳಲ್ಲಿ ವಿಚಿತ್ರ ಘಟನೆವೊಂದು ವೈರಲ್ ಆಗಿದೆ. ತೀವ್ರ ಕಾಲುನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಆಸ್ಪತ್ರೆಗೆ ತೆರಳಿದ್ದಾಗ, ವೈದ್ಯರು ನಡೆಸಿದ ಎಕ್ಸ್ರೇ ಪರೀಕ್ಷೆಯಲ್ಲಿ ಕಂಡ ದೃಶ್ಯ ನೋಡಿ ಬೆಚ್ಚಿಬಿದ್ದರು.
ಮಹಿಳೆಯ ಕಾಲಿನ ಸ್ನಾಯುಗಳೊಳಗೆ ಬರೋಬ್ಬರಿ 10 ಮುರಿದ ಹೊಲಿಗೆ ಸೂಜಿಗಳು ಸಿಲುಕಿರುವುದು ಎಕ್ಸ್ರೇನಲ್ಲಿ ಪತ್ತೆಯಾಗಿದೆ. ಈ ಅಪರೂಪದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಏನಿದು ಘಟನೆ?
ರಷ್ಯಾದ ಮಹಿಳೆಯೊಬ್ಬರು ಕಳೆದ ಕೆಲವು ವರ್ಷಗಳಿಂದ ಕಾಲಿನಲ್ಲಿ ತೀವ್ರ ನೋವಿನಿಂದ ಬಳಲುತ್ತಿದ್ದರು. ಔಷಧಿ ತೆಗೆದುಕೊಂಡರೂ ನೋವು ಕಡಿಮೆಯಾಗದ ಕಾರಣ ಅವರು ತಜ್ಞ ವೈದ್ಯರನ್ನು ಸಂಪರ್ಕಿಸಿದರು. ನೋವಿನ ನಿಖರ ಕಾರಣ ತಿಳಿಯಲು ವೈದ್ಯರು ಕಾಲಿನ ಎಕ್ಸ್ರೇ ಮಾಡಿಸಿದಾಗ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ.
ಎಕ್ಸ್ರೇನಲ್ಲಿ ಮಹಿಳೆಯ ಕಾಲಿನ ಸ್ನಾಯುಗಳು ಮತ್ತು ನರಗಳ ಮಧ್ಯೆ ಸುಮಾರು 10 ಲೋಹದ ಹೊಲಿಗೆ ಸೂಜಿಗಳು ಸಿಲುಕಿರುವುದು ಸ್ಪಷ್ಟವಾಗಿ ಗೋಚರಿಸಿತು. ಇಷ್ಟು ಸೂಜಿಗಳು ಕಾಲಿನೊಳಗಿದ್ದರೂ ಇಷ್ಟೊಂದು ವರ್ಷ ಅವರು ಹೇಗೆ ನಡೆಯುತ್ತಿದ್ದರು ಎಂಬುದು ವೈದ್ಯರಿಗೂ ಆಶ್ಚರ್ಯ ಮೂಡಿಸಿತು.
ಸೂಜಿಗಳು ಕಾಲಿಗೆ ಹೇಗೆ ಸೇರಿವೆ?
ಈ ಬಗ್ಗೆ ಮಹಿಳೆಯನ್ನು ಪ್ರಶ್ನಿಸಿದಾಗ, ಸೂಜಿಗಳು ಕಾಲಿನೊಳಗೆ ಹೇಗೆ ಬಂದವು ಎಂಬುದು ತಮಗೂ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. ಬಾಲ್ಯದಲ್ಲಿ ಆಟವಾಡುವಾಗ ಅಥವಾ ಹಿಂದೆ ನಡೆದ ಯಾವುದಾದರೂ ಅಪಘಾತದಲ್ಲಿ ಸೂಜಿಗಳು ಮುರಿದು ಕಾಲಿನೊಳಗೆ ಸೇರಿರಬಹುದೆಂದು ವೈದ್ಯರು ಶಂಕಿಸಿದ್ದಾರೆ.
ವರ್ಷಗಳ ಕಾಲ ಸೂಜಿಗಳು ಸ್ನಾಯುಗಳೊಳಗೇ ಉಳಿದಿದ್ದರಿಂದ, ವಯಸ್ಸಾಗುತ್ತಿದ್ದಂತೆ ಸ್ನಾಯುಗಳ ಮೇಲೆ ಒತ್ತಡ ಹೆಚ್ಚಾಗಿ ತೀವ್ರ ನೋವು ಕಾಣಿಸಿಕೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಯಶಸ್ವಿ ಶಸ್ತ್ರಚಿಕಿತ್ಸೆ
ವೈದ್ಯರ ತಂಡ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿ, ಕಾಲಿನಲ್ಲಿದ್ದ ಎಲ್ಲಾ 10 ಸೂಜಿಗಳನ್ನು ಸುರಕ್ಷಿತವಾಗಿ ಹೊರತೆಗೆದಿದೆ. ನರಗಳಿಗೆ ಯಾವುದೇ ಹಾನಿಯಾಗದಂತೆ ಅತ್ಯಂತ ಎಚ್ಚರಿಕೆಯಿಂದ ಶಸ್ತ್ರಚಿಕಿತ್ಸೆ ಪೂರ್ಣಗೊಳಿಸಲಾಗಿದೆ.
ಪ್ರಸ್ತುತ ಮಹಿಳೆ ಚೇತರಿಸಿಕೊಳ್ಳುತ್ತಿದ್ದು, ಕಾಲಿನ ನೋವಿನಿಂದ ಸಂಪೂರ್ಣ ಪರಿಹಾರ ಪಡೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಅಪರೂಪದ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

