ಬೆಂಗಳೂರು:ಜುಲೈ- ಶಿವಾಜಿನಗರದಲ್ಲಿ ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಹಲ್ಲೆಗೆ ಒಳಗಾದ ಅಧಿಕಾರಿಗಳಿಗೆ ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಸನ್ಮಾನಿಸಿ ಧೈರ್ಯ ತುಂಬಿದರು.
ತಮ್ಮ ಕಚೇರಿಗೆ ಅಧಿಕಾರಿಗಳನ್ನು ಆಹ್ವಾನಿಸಿದ ಸಚಿವರು, ಹೂವಿನ ಹಾರ ಹಾಕಿ, ಶಾಲು ಹೊದಿಸಿ ಗೌರವಿಸಿದರು. ಕರ್ತವ್ಯನಿಷ್ಠೆ ಹಾಗೂ ಸಾರ್ವಜನಿಕ ಸೇವೆಯಲ್ಲಿನ ಅವರ ಬದ್ಧತೆಯನ್ನು ಶ್ಲಾಘಿಸಿದ ಅವರು, “ನಿಮ್ಮ ಸೇವೆಗೆ ಧನ್ಯವಾದಗಳು” ಎಂದು ಕೈಮುಗಿದು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, “ಈ ಘಟನೆ ಬಗ್ಗೆ ತಿಳಿದು ನನಗೆ ನೋವಿನ ಜೊತೆಗೆ ಸಿಟ್ಟು ಕೂಡ ಬಂತು. ಸಾರ್ವಜನಿಕರ ಹಿತಕ್ಕಾಗಿ ಕೆಲಸ ಮಾಡುವ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವಾಗ ಹಲ್ಲೆಗೆ ಒಳಗಾಗುವುದು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಸಾರ್ವಜನಿಕ ಕೆಲಸ ಮಾಡಿ ಪೆಟ್ಟು ತಿನ್ನಬೇಕಾ ಎಂಬ ಪ್ರಶ್ನೆ ನನ್ನಲ್ಲಿ ಮೂಡಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಹಲ್ಲೆಗೊಳಗಾದ ಅಧಿಕಾರಿಗಳಾದ ಮಾಧವ ರಾವ್, ಗೌತಮ್, ಸಾವಿತ್ರಿ ಹಾಗೂ ರುಚಿತ ಅವರಿಗೆ ಸಚಿವರು ವಿಶೇಷವಾಗಿ ಸನ್ಮಾನಿಸಿ, ಮುಂದೆಯೂ ನಿರ್ಭಯವಾಗಿ ಕರ್ತವ್ಯ ನಿರ್ವಹಿಸುವಂತೆ ಪ್ರೋತ್ಸಾಹಿಸಿದರು.
ಈ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು

