ಬಾಲಿವುಡ್ನ ಜನಪ್ರಿಯ ‘ಕಭಿ ಹಾ ಕಭಿ ನಾ’ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆ ನಟಿಸಿ ಹೆಸರು ಮಾಡಿದ್ದ ನಟಿ ಸುಚಿತ್ರಾ ಕೃಷ್ಣಮೂರ್ತಿ, ತಮ್ಮ ವೈಯಕ್ತಿಕ ಜೀವನ ಹಾಗೂ ಸಿನಿಮಾ ರಂಗದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ತಮಗಿಂತ ವಯಸ್ಸಿನಲ್ಲಿ ಮೂವತ್ತು ವರ್ಷ ದೊಡ್ಡವರಾಗಿದ್ದ ಪ್ರಸಿದ್ಧ ನಿರ್ದೇಶಕ ಶೇಖರ್ ಕಪೂರ್ ಅವರನ್ನು ಮದುವೆಯಾಗಿದ್ದ ಇವರು, ನಂತರದ ದಿನಗಳಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು.
ಖಾಸಗಿ ಪಾಡ್ಕಾಸ್ಟ್ ಕಾರ್ಯಕ್ರಮವೊಂದರಲ್ಲಿ ಮುಕ್ತವಾಗಿ ಮಾತನಾಡಿರುವ ಅವರು, ೯೦ರ ದಶಕದ ಸಂದರ್ಶನಗಳಲ್ಲಿ ಜನರು ತಮ್ಮನ್ನು ‘ವಿಚ್ಛೇದನದ ಪೋಸ್ಟರ್ ಗರ್ಲ್’ ಎಂದು ಕರೆಯುತ್ತಿದ್ದರು ಎಂದಿದ್ದಾರೆ. ಆ ಸಮಯದಲ್ಲಿ ಜನರು ತಮ್ಮನ್ನು ಅತಿಯಾದ ಧೈರ್ಯವಂತೆ ಎಂದು ಕರೆದು, ಸುಮ್ಮನಿರಲು ಸಲಹೆ ನೀಡುತ್ತಿದ್ದರು. ಆದರೆ ಇಂದು ಕಾಲ ಬದಲಾಗಿದ್ದು, ಎಲ್ಲರೂ ತಮ್ಮ ಮನಸ್ಸಿನ ಮಾತನ್ನು ಧೈರ್ಯವಾಗಿ ಹೇಳಿಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ವಿಚ್ಛೇದನದ ನಂತರ ಮಕ್ಕಳನ್ನು ಬೆಳೆಸುವ (ಕೋ-ಪೇರೆಂಟಿಂಗ್) ಜವಾಬ್ದಾರಿ ಕುರಿತು ಹಂಚಿಕೊಂಡಿರುವ ಅವರು, ತಾಯಂದಿರು ಹೆಚ್ಚಿನ ಕೆಲಸ ಮಾಡಿದರೂ ಹೊಗಳಿಕೆ ತಂದೆಯ ಪಾಲಾಗುತ್ತದೆ ಎಂದು ಹಾಸ್ಯಮಯವಾಗಿ ಹೇಳಿದ್ದಾರೆ. ಆದರೂ ಮಗುವಿನ ಭವಿಷ್ಯಕ್ಕಾಗಿ ತಂದೆ ಮತ್ತು ತಾಯಿ ಇಬ್ಬರ ಪ್ರೀತಿ ಅತ್ಯಗತ್ಯ. ಹೆತ್ತವರ ನಡುವಿನ ವೈಯಕ್ತಿಕ ದ್ವೇಷ ಅಥವಾ ಅಹಂಕಾರದಿಂದ ಮಕ್ಕಳನ್ನು ತಂದೆಯಿಂದ ದೂರವಿಡುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮಾಡೆಲಿಂಗ್ ಮತ್ತು ಅಭಿನಯದ ಜೊತೆಗೆ ‘ಡೋಲ್ ಡೋಲ್’ ನಂತಹ ಹಿಟ್ ಆಲ್ಬಮ್ಗಳನ್ನು ನೀಡಿದ್ದ ಸುಚಿತ್ರಾ, ‘ಡ್ರಾಮಾ ಕ್ವೀನ್’ ಎಂಬ ಪುಸ್ತಕವನ್ನೂ ಬರೆದಿದ್ದಾರೆ. ತಮ್ಮ ಜೀವನದ ಯಾವುದೇ ನಿರ್ಧಾರದ ಬಗ್ಗೆಯೂ ತಮಗೆ ಬೇಸರವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

