ಗ್ಯಾಸ್ ಬೆಲೆಗಳ ಕುರಿತು ಕೇಂದ್ರ ಸರ್ಕಾರ ಮಹತ್ವದ ಸ್ಪಷ್ಟನೆ ನೀಡಿದೆ. ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್‌ಗಳಿಗೆ ನೇರ ಸಬ್ಸಿಡಿಯ ಜೊತೆಗೆ ಪರೋಕ್ಷ ಸಬ್ಸಿಡಿಯನ್ನೂ ನೀಡಲಾಗುತ್ತಿದೆ ಎಂದು ತಿಳಿಸಿದೆ. ಪ್ರತಿ ಗ್ಯಾಸ್ ಸಿಲಿಂಡರ್‌ಗೆ ₹500ಕ್ಕೂ ಹೆಚ್ಚು ಪರೋಕ್ಷ ಸಬ್ಸಿಡಿ ನೀಡಲಾಗುತ್ತಿದ್ದು, ಪ್ರಧಾನಮಂತ್ರಿ ಉಜ್ವಲ ಯೋಜನೆ (PMUY) ಫಲಾನುಭವಿಗಳಿಗೆ ಹೆಚ್ಚುವರಿ ಸಬ್ಸಿಡಿ ದೊರೆಯುತ್ತಿದೆ ಎಂದು ಸರ್ಕಾರ ಹೇಳಿದೆ.
ಇತ್ತೀಚೆಗೆ ಅಮೆರಿಕಾ–ಇರಾನ್ ಸಂಘರ್ಷ ಹಾಗೂ ಹೋರ್ಮುಜ್ ಜಲಸಂಧಿಯಲ್ಲಿ ಉಂಟಾದ ಅಡಚಣೆಯಿಂದ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ, ಗ್ಯಾಸ್ ಬೆಲೆಗಳು ಏರಿಕೆ ಕಂಡಿದ್ದವು. ಇದರ ಪರಿಣಾಮವಾಗಿ ಗ್ರಾಹಕರು ಸಿಲಿಂಡರ್ ಪಡೆಯಲು ಸಾಕಷ್ಟು ತೊಂದರೆ ಅನುಭವಿಸಿದ್ದರು. ಇದೀಗ ಮತ್ತೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಿರುವ ಹಿನ್ನೆಲೆ ಗ್ಯಾಸ್ ಬೆಲೆಗಳು ಮತ್ತಷ್ಟು ಏರಿಕೆಯಾಗಬಹುದು ಎಂಬ ಆತಂಕ ವ್ಯಕ್ತವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶದಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಲೆಗಳು ಏರಿದರೂ, ದೇಶೀಯ ಗ್ರಾಹಕರ ಮೇಲಿನ ಹೊರೆ ಕಡಿಮೆ ಮಾಡಲು ಸಬ್ಸಿಡಿಯನ್ನು ಮುಂದುವರಿಸಲಾಗಿದೆ ಎಂದು ತಿಳಿಸಿದೆ.
ಕೇಂದ್ರದ ಮಾಹಿತಿಯಂತೆ, ಪ್ರಸ್ತುತ 14.2 ಕೆ.ಜಿ. ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಬೆಲೆ ₹942 ಆಗಿದೆ. ಆದರೆ, ಜೂನ್ 2026ರಲ್ಲಿ ಪ್ರತಿ ಸಿಲಿಂಡರ್‌ಗೆ ₹700ಕ್ಕೂ ಹೆಚ್ಚು ಪರೋಕ್ಷ ಸಬ್ಸಿಡಿ ನೀಡಲಾಗಿದೆ. ಜುಲೈ ತಿಂಗಳಲ್ಲಿಯೂ ₹500ಕ್ಕೂ ಹೆಚ್ಚು ಪರೋಕ್ಷ ಸಬ್ಸಿಡಿ ಮುಂದುವರಿಯಲಿದೆ ಎಂದು ತಿಳಿಸಿದೆ.
ಇದೇ ವೇಳೆ ಪ್ರಧಾನಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳು ಪ್ರತಿ ಸಿಲಿಂಡರ್‌ಗೆ ₹640 ಮಾತ್ರ ಪಾವತಿಸುತ್ತಿದ್ದಾರೆ. ಇವರಿಗೆ ಕೇಂದ್ರ ಸರ್ಕಾರ ₹300 ನೇರ ಸಬ್ಸಿಡಿ ನೀಡುವುದರ ಜೊತೆಗೆ ₹500ಕ್ಕೂ ಹೆಚ್ಚು ಪರೋಕ್ಷ ಸಬ್ಸಿಡಿಯನ್ನೂ ಒದಗಿಸುತ್ತಿದೆ ಎಂದು ತಿಳಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 14.2 ಕೆ.ಜಿ. ಎಲ್‌ಪಿಜಿ ಸಿಲಿಂಡರ್ ಬೆಲೆ ಸುಮಾರು ₹1,695 ಇದ್ದರೂ, ಭಾರತೀಯ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬೀಳದಂತೆ ಸರ್ಕಾರ ಬೆಲೆಗಳನ್ನು ನಿಯಂತ್ರಿಸುತ್ತಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

