ಬಳ್ಳಾರಿ: ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ರಾಬರ್ಟ್ ಬ್ರೂಸ್ ಫೂಟ್ ಸಂಗನಕಲ್ಲು ಪುರಾತತ್ವ ವಸ್ತು ಸಂಗ್ರಹಾಲಯದ ಸಂಯುಕ್ತ ಆಶ್ರಯದಲ್ಲಿ ಭಾನುವಾರ ‘ವಿಶ್ವ ಪ್ರವಾಸೋದ್ಯಮ ದಿನಾಚರಣೆ–2026’ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ದಿನಾಚರಣೆಯ ಅಂಗವಾಗಿ ಬೆಳಿಗ್ಗೆ ಸರಳಾದೇವಿ ಕಾಲೇಜಿನ ಇತಿಹಾಸ ಮತ್ತು ಪ್ರವಾಸೋದ್ಯಮ ವಿಭಾಗದ ಸುಮಾರು 150 ವಿದ್ಯಾರ್ಥಿಗಳಿಗೆ ಐತಿಹಾಸಿಕ ಮಹತ್ವವುಳ್ಳ ಸಂಗನಕಲ್ಲು ಪ್ರಾಗೈತಿಹಾಸಿಕ ತಾಣಕ್ಕೆ ಮಾರ್ಗದರ್ಶಿ ಪ್ರವಾಸವನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ಸ್ಥಳದಲ್ಲೇ ಪ್ರಾಚೀನ ಇತಿಹಾಸ, ಶಿಲಾಯುಗದ ಕುರುಹುಗಳು ಹಾಗೂ ಪರಿಸರದ ಬಗ್ಗೆ ನೇರ ಮಾಹಿತಿ ಪಡೆದುಕೊಂಡರು.
ಡಿಜಿಟಲ್ ತಂತ್ರಜ್ಞಾನ ಮತ್ತು ಎಐ ಕುರಿತು ಉಪನ್ಯಾಸ: ಕ್ಷೇತ್ರ ಭೇಟಿಯ ನಂತರ ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ‘ಹೊಂಗಿರಣ’ ವೇದಿಕೆಯಲ್ಲಿ ವಿಚಾರ ಸಂಕಿರಣ ಹಾಗೂ ವೇದಿಕೆ ಕಾರ್ಯಕ್ರಮ ನಡೆಯಿತು. ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ. ಶಶಿಕಾಂತ್ ಅವರು ‘ಪ್ರವಾಸೋದ್ಯಮವನ್ನು ಮರುರೂಪಿಸಲು ಡಿಜಿಟಲ್ ಕಾರ್ಯಸೂಚಿ ಮತ್ತು ಕೃತಕ ಬುದ್ಧಿಮತ್ತೆ (ಎಐ)’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಪ್ರಸ್ತುತ ಆಧುನಿಕ ಯುಗದಲ್ಲಿ ಪ್ರವಾಸೋದ್ಯಮ ಕ್ಷೇತ್ರವು ಡಿಜಿಟಲ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ನೆರವಿನಿಂದ ಹೇಗೆ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ ಹಾಗೂ ಇದು ಪ್ರವಾಸಿಗರಿಗೆ ಯಾವ ರೀತಿ ನೆರವಾಗಲಿದೆ ಎಂಬುದನ್ನು ಅವರು ಸವಿಸ್ತಾರವಾಗಿ ವಿವರಿಸಿದರು.
ಸಂಗನಕಲ್ಲು ಮ್ಯೂಸಿಯಂ ದೇಶಕ್ಕೇ ಹೆಮ್ಮೆ:
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ನಾಗರಾಜ ಅವರು ಮಾತನಾಡಿ, ಪ್ರವಾಸೋದ್ಯಮವು ಸಂಸ್ಕೃತಿಗಳ ವಿನಿಮಯ ಮತ್ತು ಆರ್ಥಿಕ ವಿಕಾಸಕ್ಕೆ ಹೇಗೆ ಪೂರಕವಾಗಿದೆ ಎಂಬುದರ ಕುರಿತು ಬೆಳಕು ಚೆಲ್ಲಿದರು.
ಬಳಿಕ ರಾಬರ್ಟ್ ಬ್ರೂಸ್ ಫೂಟ್ ಸಂಗನಕಲ್ಲು ಪುರಾತತ್ವ ವಸ್ತು ಸಂಗ್ರಹಾಲಯದ ಅಹಿರಾಜ್ ಅವರು ಮಾತನಾಡಿ, ಸಂಗನಕಲ್ಲು ಪ್ರಾಗೈತಿಹಾಸಿಕ ತಾಣವು ಜಾಗತಿಕ ಮಟ್ಟದಲ್ಲೇ ಅಪಾರ ಮಹತ್ವವನ್ನು ಹೊಂದಿದೆ. ಬಳ್ಳಾರಿಯಲ್ಲಿರುವ ರಾಬರ್ಟ್ ಬ್ರೂಸ್ ಫೂಟ್ ಸಂಗನಕಲ್ಲು ಪುರಾತತ್ವ ವಸ್ತು ಸಂಗ್ರಹಾಲಯವು ಇಡೀ ಭಾರತದಲ್ಲೇ ಪ್ರಾಗೈತಿಹಾಸಿಕ ಅಧ್ಯಯನ ಮತ್ತು ಸಂಶೋಧನಾ ದೃಷ್ಟಿಯಿಂದ ಸ್ಥಾಪಿಸಲಾದ ಅತ್ಯಂತ ಪ್ರಮುಖ ಹಾಗೂ ವಿಶಿಷ್ಟ ಮ್ಯೂಸಿಯಂ ಆಗಿದೆ ಎಂದು ಹೆಮ್ಮೆಯಿಂದ ತಿಳಿಸಿದರು.
ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ರಾಬರ್ಟ್ ಬ್ರೂಸ್ ಫೂಟ್ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿ, ಅಲ್ಲಿ ಪ್ರದರ್ಶಿಸಲಾಗಿರುವ ನವಶಿಲಾಯುಗದ ಅವಶೇಷಗಳು ಹಾಗೂ ಅಪರೂಪದ ಪುರಾತತ್ವ ಸಂಗ್ರಹಗಳನ್ನು ವೀಕ್ಷಿಸಿದರು.
ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಅಧಿಕಾರಿ ಶ್ರೀಹರಿ ಮಸನೂರು, ಇಲಾಖೆಯ ವಿವಿಧ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಸರಳಾದೇವಿ ಕಾಲೇಜಿನ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅನಿಲ್ ಕುಮಾರ್ ಹೆಚ್. ಎಂ.ಗೆ ವಿಟಿಯುನಿಂದ ಡಾಕ್ಟರೇಟ್ ಪದವಿ ಪ್ರದಾನ
ಬಳ್ಳಾರಿ: ನಗರದ ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್ಮೆಂಟ್ (ಬಿಐಟಿಎಂ) ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಅನಿಲ್ಕುಮಾರ್ ಹೆಚ್. ಎಂ. ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ (ವಿಟಿಯು) ಪ್ರತಿಷ್ಠಿತ ಡಾಕ್ಟರೇಟ್ (ಪಿಹೆಚ್.ಡಿ) ಪದವಿ ಲಭಿಸಿದೆ.
ಬೆಳಗಾವಿಯ ವಿಟಿಯು ಆವರಣದಲ್ಲಿ ಶನಿವಾರ (ಸೆಪ್ಟೆಂಬರ್ 26) ಜರುಗಿದ ಘಟಿಕೋತ್ಸವ ಸಮಾರಂಭದಲ್ಲಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರು ಸೇರಿದಂತೆ ಹಲವು ಗಣ್ಯರ ಉಪಸ್ಥಿತಿಯಲ್ಲಿ ಅನಿಲ್ಕುಮಾರ್ ಅವರು ಅಧಿಕೃತವಾಗಿ ಪಿಎಚ್.ಡಿ ಪದವಿಯನ್ನು ಸ್ವೀಕರಿಸಿದರು.
ಬಳ್ಳಾರಿಯ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನ (RYMEC) ಸಂಶೋಧನಾ ಕೇಂದ್ರದ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮಾರ್ಗದರ್ಶಕಿ ಡಾ. ಎಂ. ಎಸ್. ಶೋಭಾ ಅವರ ಮಾರ್ಗದರ್ಶನದಲ್ಲಿ ಅನಿಲ್ಕುಮಾರ್ ಅವರು ಸಂಶೋಧನೆ ಪೂರ್ಣಗೊಳಿಸಿದ್ದಾರೆ. ಅವರು ಮಂಡಿಸಿದ “Investigation on Performance Evaluation of Geopolymer Concrete with Multi Fibers and M-Sand for Different Molarities” ಕುರಿತಾದ ಸಂಶೋಧನಾ ಮಹಾಪ್ರಬಂಧಕ್ಕೆ ವಿಟಿಯು ಈ ಪಿಎಚ್.ಡಿ ಪದವಿಯನ್ನು ನೀಡಿದೆ.
ಕಾಲೇಜು ಆಡಳಿತ ಮಂಡಳಿ, ಪ್ರಾಧ್ಯಾಪಕ ವೃಂದ, ವಿದ್ಯಾರ್ಥಿಗಳು ಹಾಗೂ ಹಿತೈಷಿಗಳು ಹಾರ್ದಿಕ ಅಭಿನಂದನೆ ಸಲ್ಲಿಸಿದ್ದಾರೆ.

