ಬೆಂಗಳೂರು: ಬೆಂಗಳೂರು ಮಹಾನಗರದ ವ್ಯಾಪ್ತಿಯ ನ್ಯಾಯಾಲಯಗಳಲ್ಲಿ ಮೂಲಸೌಕರ್ಯ ಒದಗಿಸುವಂತೆ ಆಗ್ರಹಿಸಿ ಬೆಂಗಳೂರು ವಕೀಲರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ನ್ಯಾಯಾಲಯಗಳಿಗೆ ಮೂಲಸೌಕರ್ಯಗಳನ್ನು ಒದಗಿಸುವ ಹಾಗೂ ಗಂಭೀರ ಸ್ವರೂಪದ ಆಡಳಿತಾತ್ಮಕ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಹೈಕೋರ್ಟ್ ರಿಜಿಸ್ಟ್ರಿ ಯಾವುದೇ ಕ್ರಮ ಕೈಗೊಂಡಿಲ್ಲ. ಹೈಕೋರ್ಟ್‌ನಲ್ಲಿ ಹೊಸ ಪ್ರಕರಣಗಳ ವಿಚಾರಣೆಗೆ ದಿನಾಂಕಗಳು ಸಿಗುತ್ತಿಲ್ಲವಾದ ಕಾರಣ ವಿಚಾರಣೆ ವಿಳಂಬವಾಗುತ್ತಿದೆ. ಇದರಿಂದ ದಾವೆದಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ವಕೀಲರಿಗೆ ಶೌಚಾಲಯ, ಲಿಫ್ಟ್ ಮತ್ತು ಪಾರ್ಕಿಂಗ್‌ನಂತಹ ಮೂಲಭೂತ ಸೌಲಭ್ಯಗಳೂ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಡೀ ಏಷ್ಯಾದಲ್ಲೇ ಅತಿದೊಡ್ಡ ವಕೀಲರ ಸಂಘಕ್ಕೆ ಕನಿಷ್ಠ ಸೌಲಭ್ಯಗಳಿಗಾಗಿ ಪ್ರತಿಭಟಿಸುವುದು ನಿಜಕ್ಕೂ ಹಾಸ್ಯಾಸ್ಪದ ಎಂದು ಕಿಡಿಕಾರಿದರು.
ಬೆಂಗಳೂರು ನಗರ ಸಿವಿಲ್ ಕೋರ್ಟ್‌ನಲ್ಲಿ ಬರೋಬ್ಬರಿ 25 ನ್ಯಾಯಾಲಯಗಳು ನ್ಯಾಯಾಧೀಶರ ಹುದ್ದೆ ಖಾಲಿ ಇದೆ. ಈ ನ್ಯಾಯಾಲಯಗಳಿಗೆ ಮತ್ತೊಬ್ಬ ನ್ಯಾಯಾಧೀಶರನ್ನು ಉಸ್ತುವಾರಿಯಾಗಿ ನೇಮಿಸುತ್ತಿದ್ದು, ಎರಡೂ ನ್ಯಾಯಾಲಯಗಳ ಕಲಾಪಕ್ಕೆ ತೀವ್ರ ಅಡ್ಡಿಯಾಗುತ್ತಿದೆ. ಹೈಕೋರ್ಟ್ ಸೇರಿದಂತೆ ಸಿಟಿ ಸಿವಿಲ್ ಕೋರ್ಟ್, ಮ್ಯಾಜಿಸ್ಟ್ರೇಟ್ ಮತ್ತು ಮೇಯೊ ಹಾಲ್ ಕೋರ್ಟ್ ಸೇರಿದಂತೆ ಎಲ್ಲ ನ್ಯಾಯಾಲಯಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಎಎಬಿ 2026ರ ಏಪ್ರಿಲ್‌ನಲ್ಲಿ ಪತ್ರ ಬರೆದಿತ್ತು. ನಂತರ ಹಲವು ಬಾರಿ ಸಮಸ್ಯೆಗಳನ್ನು ಪುನರುಚ್ಚರಿಸಿದೆ. ಆದರೂ, ಈ ವಿಷಯಗಳ ಕುರಿತಂತೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಿದರು.
ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಹೊಸ ಕಟ್ಟಡದಲ್ಲಿ ಕೇವಲ ಒಂದೇ ಒಂದು ಲಿಫ್ಟ್ ಇರುವುದರಿಂದ, ವಕೀಲರು ಮತ್ತು ವಯಸ್ಸಾದ ಕಕ್ಷಿದಾರರು 7ನೇ ಮಹಡಿಯವರೆಗೆ ಮೆಟ್ಟಿಲು ಹತ್ತಿಯೇ ಹೋಗಬೇಕಾದ ಅನಿವಾರ್ಯತೆ ಇದೆ. ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ಕೆಲವು ನ್ಯಾಯಮೂರ್ತಿಗಳು ವಕೀಲರನ್ನು ಅಗೌರವದಿಂದ ನೋಡುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ವಕೀಲರ ಸಂಘ ಸರ್ಕಾರ ಮತ್ತು ನ್ಯಾಯಾಂಗ ಇಲಾಖೆಯನ್ನು ಒತ್ತಾಯಿಸಿದೆ.

