ಚಿಕ್ಕಬಳ್ಳಾಪುರ-ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಚಿಕ್ಕಬಳ್ಳಾಪುರ ಜಿಲ್ಲಾ ಪ್ರವಾಸ ಕೈಗೊಂಡು, ಜಿಲ್ಲೆಯ ʼಬರ ಪರಿಸ್ಥಿತಿ ಹಾಗೂ ಕಂದಾಯ ವಿಷಯʼಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಿದರು.
ಬೆಳೆ ವಿಮೆ ನೋಂದಣಿ ಗುರಿ ತಲುಪದಿದ್ದಕ್ಕೆ ಅಸಮಾಧಾನ
ಬೆಳೆ ವಿಮೆ ಎಂಬುದು ರೈತರಿಗೆ ವರದಾನ. ಬೆಳೆ ನಷ್ಟ ಆದ ಸಂದರ್ಭದಲ್ಲಿ ವಿಮೆಯಿಂದ ರೈತರಿಗೆ ಒಂದಷ್ಟು ಅನುಕೂಲವಾಗುತ್ತದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 80 ಸಾವಿರ ನೋಂದಣಿಗೆ ಗುರಿ ನೀಡಲಾಗಿದೆ. ಈವರೆಗೆ 24 ಸಾವಿರ ಮಾತ್ರ ನೋಂದಣಿಯಾಗಿದೆ. ಬೆಳೆ ವಿಮೆ ಕಟ್ಟಲು ಪ್ರೋತ್ಸಾಹಿಸದಿದ್ದರೆ ಹೇಗೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ರೈತರಿಗೆ ಸಹಾಯ ಮಾಡಲು ಅವಕಾಶ ಇದೆ. ನಿಮ್ಮ ಸೋಮಾರಿತನದಿಂದ ರೈತರು ಕಷ್ಟ ಅನುಭವಿಸಬೇಕೆ? ನಿಮ್ಮ ಅನಗತ್ಯ ಉತ್ತರಗಳು ನನಗೆ ಬೇಕಿಲ್ಲ. ಬೆಳೆ ವಿಮೆ ಕಟ್ಟಿಸುವ ಗುರಿಯನ್ನು ಪೂರ್ಣಗೊಳಿಸಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.
ಬೆಳೆ ವಿಮೆ ಕಟ್ಟಿಸುವಲ್ಲಿ ಅಧಿಕಾರಿಗಳು ಯಾವುದೇ ರೀತಿಯಲ್ಲೂ ನಿರ್ಲಕ್ಷಿಸುವುದು ಬೇಡ. ನಷ್ಟ ಅನುಭವಿಸಿದ ರೈತರಿಗೆ ವಿಮೆ ಹಣ ಸಿಗುವಂತೆ ನೋಡಿಕೊಳ್ಳಬೇಕು. ಇದರಲ್ಲಿ ಲೋಪ, ನಿರ್ಲಕ್ಷ್ಯ ಕಂಡು ಬಂದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಮೇವು ಸಂಗ್ರಹ ಮತ್ತು ಜಾನುವಾರು ನಿರ್ವಹಣೆ
ಜಿಲ್ಲೆಯಲ್ಲಿ 1.86 ಲಕ್ಷ ಜಾನುವಾರು, 10 ಲಕ್ಷ ಕುರಿ-ಮೇಕೆಗಳಿವೆ. 3 ಲಕ್ಷ ಟನ್ ಮೇವು ಸಂಗ್ರಹವಿದೆ ಎಂದು ಮಾಹಿತಿ ನೀಡಿದ್ದೀರಿ. ಮೇವು ಸಂಗ್ರಹ ಯಾವ ಆಧಾರದ ಮೇಲೆ ಮಾಹಿತಿ ನೀಡಿದ್ದೀರಿ. ರೈತರ ಬಳಿ ಮೇವು ಇರುವುದನ್ನು ಖಾತ್ರಿ ಪಡಿಸಿಕೊಂಡಿದ್ದೀರ? ಎಂದು ಪ್ರಶ್ನಿಸಿದರು.
ಮುಂದಿನ ಬೇಸಿಗೆಗೆ ಯಾವುದೇ ರೀತಿಯಲ್ಲಿ ಮೇವಿನ ಕೊರತೆ ಎದುರಾಗಬಾರದು. ನೀರು ಲಭ್ಯತೆ ಇರುವ ರೈತರಿಗೆ ಬೀಜ ವಿತರಿಸಿ, ಮೇವು ಬೆಳೆಯಲು ಪ್ರೋತ್ಸಾಹಿಸಿ ಎಂದು ನಿರ್ದೇಶಿಸಿದರು.
ಕುಡಿಯುವ ನೀರಿನ ಪೂರೈಕೆಗೆ ಕ್ರಿಯಾ ಯೋಜನೆ
ಕುಡಿಯುವ ನೀರಿಗಾಗಿ ಕ್ಷೇತ್ರವಾರು 1 ಕೋಟಿ ರೂ. ನೀಡಲಾಗುತ್ತಿದೆ. ಈ ಬಗ್ಗೆ ತಾಲ್ಲೂಕು ಟಾಸ್ಕ್‌ಫೋರ್ಸ್ ತಂಡವೂ ಕ್ರಿಯಾ ಯೋಜನೆ ರೂಪಿಸಬೇಕು. ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಿರಂತರವಾಗಿ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

