HomeLatest Newsನೀಟ್ ಪ್ರತಿಭಟನೆಗೆ ರಾಹುಲ್ ಗಾಂಧಿ ಎಂಟ್ರಿಯಾಗುತ್ತಿದ್ದಂತೆ ಬೀದಿಗೆ ಬಿತ್ತು ವಿರೋಧ ಪಕ್ಷಗಳ ಒಕ್ಕೂಟದೊಳಗಿನ ಬಿರುಕಿನ ವಿಷಯ!

ನೀಟ್ ಪ್ರತಿಭಟನೆಗೆ ರಾಹುಲ್ ಗಾಂಧಿ ಎಂಟ್ರಿಯಾಗುತ್ತಿದ್ದಂತೆ ಬೀದಿಗೆ ಬಿತ್ತು ವಿರೋಧ ಪಕ್ಷಗಳ ಒಕ್ಕೂಟದೊಳಗಿನ ಬಿರುಕಿನ ವಿಷಯ!

ನವದೆಹಲಿ-ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಚಳುವಳಿಯ ನಡುವೆಯೇ, ವಿರೋಧ ಪಕ್ಷಗಳ ಒಕ್ಕೂಟದ ಒಳಗಿನ ಭಿನ್ನಾಭಿಪ್ರಾಯಗಳು ಬೀದಿಗೆ ಬಂದಿವೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸದ ಬಳಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸಿದ ದಿಢೀರ್ ಪ್ರತಿಭಟನೆಯನ್ನು “ಕಾಂಗ್ರೆಸ್ ಮತ್ತು ಬಿಜೆಪಿಯ ಸಮ್ಮಿಲನ” ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಆರೋಪಿಸಿದ್ದು, ಈ ಹೇಳಿಕೆಗೆ ವಿಪಕ್ಷ ನಾಯಕರು ಹಾಗೂ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ತೀವ್ರ ಟೀಕೆ ವ್ಯಕ್ತವಾಗಿದೆ.

ಎಎಪಿ ನಾಯಕರ ಆರೋಪಗಳೇನು?

ಪ್ರಧಾನಿ ನಿವಾಸದ (7, ಲೋಕ ಕಲ್ಯಾಣ್ ಮಾರ್ಗ) ಬಳಿ ರಾಹುಲ್ ಗಾಂಧಿ ಪ್ರತಿಭಟನೆ ನಡೆಸಿ ಬಂಧನಕ್ಕೊಳಗಾದ ಬೆನ್ನಲ್ಲೇ, ಎಎಪಿ ನಾಯಕರು ಕಾಂಗ್ರೆಸ್ ವಿರುದ್ಧ ಹರಿದುಬಿದ್ದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂಜಯ್ ಸಿಂಗ್ ವಾದ- ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ‘ಜಿರಳೆ ಜನತಾ ಪಕ್ಷ’ (ಸಿಜೆಪಿ) ಮತ್ತು ಸೋನಮ್ ವಾಂಗ್‌ಚುಕ್ ಅವರ ಪ್ರತಿಭಟನೆಯನ್ನು ದುರ್ಬಲಗೊಳಿಸಲು ಪ್ರಧಾನಿ ಮೋದಿ ಅವರೇ ರಾಹುಲ್ ಗಾಂಧಿಯವರನ್ನು ಪ್ರತಿಭಟನೆಯಲ್ಲಿ ಕೂರಿಸಿದ್ದಾರೆ ಎಂದು ಎಎಪಿ ಸಂಸದ ಸಂಜಯ್ ಸಿಂಗ್ ‘ಎಕ್ಸ್’ (ಟ್ವಿಟರ್)ನಲ್ಲಿ ಆರೋಪಿಸಿದ್ದಾರೆ.

ಅತಿಶಿ ಮತ್ತು ಸೌರಭ್ ಭಾರದ್ವಾಜ್ ಹೇಳಿಕೆ- ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕಿ ಅತಿಶಿ ಮಾತನಾಡಿ, “ಸೋಮವಾರ ಸಿಜೆಪಿ ಪ್ರತಿಭಟನಾಕಾರರನ್ನು 100 ಮೀಟರ್ ಕೂಡ ಚಲಿಸದಂತೆ ತಡೆದ ಪೊಲೀಸರು, ರಾಹುಲ್ ಗಾಂಧಿ ಅವರಿಗೆ ಪ್ರಧಾನಿ ನಿವಾಸ ತಲುಪಲು ಅವಕಾಶ ನೀಡಿದ್ದಾರೆ” ಎಂದು ಹೇಳುವ ಮೂಲಕ ಇದನ್ನು “ಕಾಂಗ್ರೆಸ್-ಬಿಜೆಪಿ ಜುಗಲ್‌ಬಂದಿ” ಎಂದು ಕರೆದಿದ್ದಾರೆ.

ಅಲ್ಲದೆ, ಪ್ರತಿಭಟನೆ ಆರಂಭವಾದ ಕೆಲವೇ ಗಂಟೆಗಳಲ್ಲಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿದ್ದನ್ನೂ ಅವರು ಪ್ರಶ್ನಿಸಿದ್ದಾರೆ.

ಮೈತ್ರಿಕೂಟದಲ್ಲೇ ಬಿರುಕು?

ಟಿಎಂಸಿ, ಕಾಂಗ್ರೆಸ್ ಮತ್ತು ಸಾರ್ವಜನಿಕರ ತೀವ್ರ ಆಕ್ರೋಶ

ಎಎಪಿ ನಾಯಕರ ಈ ಹೇಳಿಕೆಗಳು ವಿಪಕ್ಷಗಳ ಒಕ್ಕೂಟದ ನಾಯಕರನ್ನು ಹಾಗೂ ನೆಟಿಜನ್‌ಗಳನ್ನು ಕೆರಳಿಸಿವೆ.

ಟಿಎಂಸಿ ಕಿಡಿ-ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕೀರ್ತಿ ಆಜಾದ್, ಸಂಜಯ್ ಸಿಂಗ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿ, “ಇದು ನಿಮ್ಮಿಂದ ನಿರೀಕ್ಷಿಸಿರಲಿಲ್ಲ… ನೀವು ನಮ್ಮ ಸ್ನೇಹವನ್ನು ನಾಚಿಕೆಪಡಿಸಿದ್ದೀರಿ” ಎಂದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ತಿರುಗೇಟು- ಕಾಂಗ್ರೆಸ್ ನಾಯಕ ಶ್ರೀನಿವಾಸ್ ಬಿ.ವಿ. ಅವರು, “ಈ ಟ್ವೀಟ್ ಬರೆದದ್ದು ಅಮಿತ್ ಮಾಳವೀಯ ಅವರೋ ಅಥವಾ ರಾಘವ್ ಚಾಧಾ ಅವರೋ?” ಎಂದು ಪ್ರಶ್ನಿಸುವ ಮೂಲಕ ಎಎಪಿ ಮತ್ತು ಬಿಜೆಪಿ ನಡುವೆ ಒಳ ಒಪ್ಪಂದವಿದೆ ಎಂಬಂತೆ ತಿರುಗೇಟು ನೀಡಿದ್ದಾರೆ.

ಸಾರ್ವಜನಿಕರ ಆಕ್ರೋಶ-ಸ್ಟ್ಯಾಂಡ್-ಅಪ್ ಹಾಸ್ಯನಟ ಹಾಗೂ ಚಲನಚಿತ್ರ ನಿರ್ಮಾಪಕ ವರುಣ್ ಗ್ರೋವರ್ ಸೇರಿದಂತೆ ಹಲವು ನೆಟಿಜನ್‌ಗಳು ಅತಿಶಿ ಅವರ ಪೋಸ್ಟ್‌ಗೆ “ಸ್ವಲ್ಪ ನಾಚಿಕೆಪಡಬೇಕು, ಮೊದಲು ಇದನ್ನು ಅಳಿಸಿ” ಎಂದು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಒಳಜಗಳವನ್ನು ಬಳಸಿಕೊಂಡ ಬಿಜೆಪಿ

ಜಗಳದ ಲಾಭ ಗಿಟ್ಟಿಸಲು ಮುಂದಾದ ಬಿಜೆಪಿ

ವಿಪಕ್ಷಗಳ ನಡುವಿನ ಈ ಆಂತರಿಕ ಗದ್ದಲವನ್ನು ಬಿಜೆಪಿ ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿದೆ.ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ,”ಪ್ರಾಯೋಜಿತ ಪ್ರತಿಭಟನೆಗಳು ಎಂದಿಗೂ ವಿದ್ಯಾರ್ಥಿಗಳ ಹಿತಾಸಕ್ತಿಗಾಗಿರಲಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ಯಾವುದೇ ಸಂತ್ರಸ್ತ ವಿದ್ಯಾರ್ಥಿಗೆ ಇಲ್ಲಿ ವೇದಿಕೆ ಸಿಕ್ಕಿಲ್ಲ. ವಿರೋಧ ಪಕ್ಷದ ರಾಜಕಾರಣಿಗಳು ರಾಜಕೀಯ ಪ್ರಸ್ತುತತೆಗಾಗಿ ಜಂತರ್ ಮಂತರ್ ಗೆ ಭೇಟಿ ನೀಡುತ್ತಿದ್ದರು, ಈಗ ಕ್ರೆಡಿಟ್‌ಗಾಗಿ ಜಗಳವಾಡುತ್ತಿದ್ದಾರೆ. ಬಿಜೆಪಿಯನ್ನು ಹೊರತುಪಡಿಸಿ ಬೇರೆ ಯಾರೂ ವಿದ್ಯಾರ್ಥಿಗಳ ಪರವಾಗಿಲ್ಲ.” ಎಂದು ಹೇಳಿದ್ದಾರೆ.

ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಗಂಭೀರ ವಿಷಯಗಳ ವಿರುದ್ಧ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿರುವಾಗ, ವಿರೋಧ ಪಕ್ಷಗಳಾದ ಎಎಪಿ ಮತ್ತು ಕಾಂಗ್ರೆಸ್ ನಡುವಿನ ಈ ಶ್ರೇಯಸ್ಸಿನ (Credit) ಕಿತ್ತಾಟವು ಮೂಲ ಪ್ರತಿಭಟನೆಯ ದಾರಿಯನ್ನು ತಪ್ಪಿಸುತ್ತಿದೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular