ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ಹಾಗೂ ಸಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದು, ಊಹೆಗೂ ಮೀರಿ ಜನರು ಜಮಾಯಿಸಿದ್ದಾರೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ವಿದ್ಯಾರ್ಥಿಗಳಿಗೆ ಆದ ಅನ್ಯಾಯದ ವಿರುದ್ಧ ದನಿ ಎತ್ತಿ ಹಾಗೂ ಆತ್ಮಹತ್ಯೆಗೊಳಗಾದ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸಿ ಎಂದು ಪ್ರತಿಭಟನೆಯನ್ನು ನಡೆಸಲಾಗುತ್ತಿದೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಇದರ ಹೊಣೆ ಹೊತ್ತುಕೊಂಡು ರಾಜೀನಾಮೆ ನೀಡಬೇಕು ಎಂದು ಪಟ್ಟುಹಿಡಿದ ವಿದ್ಯಾರ್ಥಿಗಳು ಧರ್ಮೇಂದ್ರ ಪ್ರಧಾನ್, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಇನ್ನು ಪ್ರತಿಭಟನೆಯ ಕುರಿತು ಪರ ವಿರೋಧಗಳು ವ್ಯಕ್ತವಾಗುತ್ತಿದ್ದು, ಬಿಜೆಪಿ ಬೆಂಬಲಿಗರು ಇದೊಂದು ಷಡ್ಯಂತ್ರ ಎಂದರೆ, ಉಳಿದವರು ಈಗಲೂ ಪಕ್ಷದ ಬಾಲ ಹಿಡಿಯುವ ಕೆಲಸ ಬಿಟ್ಟು ಮಕ್ಕಳಿಗೆ ನ್ಯಾಯ ಕೊಡಿಸುವ ಕಡೆ ಗಮನ ಕೊಡಿ ಎಂದು ತಿಳಿಹೇಳಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿ ಲಾಠಿ ಚಾರ್ಜ್ ಸಹ ನಡೆದಿದ್ದು, ಅನೇಕ ಪ್ರತಿಭಟನಾಕಾರರು ಹಾಗೂ ಕೆಲ ಪೊಲೀಸರಿಗೂ ಸಹ ಪೆಟ್ಟಾಗಿದೆ. ಇಷ್ಟೆಲ್ಲ ನಡೆದರೂ ಪಟ್ಟುಬಿಡದ ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರಿಸಿದ್ದು, ಸ್ಥಳದಲ್ಲಿ ವಿಶೇಷ ದೃಶ್ಯವೊಂದು ಜನರ ಮನಗೆದ್ದಿದೆ.
ಹೌದು, ಜಂತರ್ ಮಂತರ್‌ಗೆ ಲೋಡ್‌ಗಟ್ಟಲೆ ಊಟ, ನೀರನ್ನು ಸ್ವಿಗ್ಗಿ, ಜೊಮ್ಯಾಟೊ ಮೂಲಕ ದೆಹಲಿಯ ನಿವಾಸಿಗಳು ಕಳುಹಿಸಿಕೊಟ್ಟಿದ್ದಾರೆ. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಸ್ವಿಗ್ಗಿ, ಜೊಮ್ಯಾಟೊಯಿಂದ ಡೆಲಿವರಿಯಾದ ಮೂಟೆಗಟ್ಟಲೆ ಊಟ ಹಾಗೂ ನೀರಿನ ಬಾಕ್ಸ್‌ಗಳನ್ನು ಒಂದೆಡೆ ಇಡಲಾಗಿದೆ. ಇನ್ನು ಯಾರ ಹೆಸರಿಗೆ ಡೆಲಿವರಿ ಮಾಡಬೇಕು ಎಂದು ಹೆಸರನ್ನೂ ಸಹ ಉಲ್ಲೇಖಿಸದೇ ಜಂತರ್ ಮಂತರ್ ಎಂದು ಡೆಲಿವರಿ ಅಡ್ರೆಸ್ ಬರೆದು ಜನರು ಆರ್ಡರ್ ಮಾಡಿದ್ದು, ನಾವು ಜಂತರ್ ಮಂತರ್‌ಗೆ ಬಾರದಿದ್ದರೂ ಪ್ರತಿಭಟನೆಗೆ ನಮ್ಮ ಬೆಂಬಲವಿದೆ ಎಂಬುದನ್ನು ತಿಳಿಸಿದ್ದಾರೆ.
ಇನ್ನು ಕೇವಲ ದೆಹಲಿಯಿಂದ ಮಾತ್ರವಲ್ಲದೇ ದೇಶದ ಇತರೆ ನಗರಗಳಿಂದಲೂ ಸಹ ಜನರು ಊಟವನ್ನು ಆರ್ಡರ್ ಮಾಡಿ ಜಂತರ್ ಮಂತರ್‌ಗೆ ತಲುಪಿಸಿದ್ದು, ಡೆಲಿವರಿ ಬಾಯ್ ಒಬ್ಬ ಮುಂಬೈನಿಂದ ಆರ್ಡರ್ ಮಾಡಿದ್ದಾರೆ ಎಂದು ಊಟ ಕೊಟ್ಟು ತೆರಳಿದ ವಿಡಿಯೊ ಸಹ ವೈರಲ್ ಆಗಿದೆ.
https://x.com/Nher_who/status/2079744199977751015?s=20

