ಬೆಂಗಳೂರು: ಫುಟ್ಪಾತ್ ಗಳಲ್ಲಿನ ಅಂಗಡಿ ಮುಗ್ಗಟ್ಟು, ಬಿಡಾಡಿ ವಾಹನಗಳ ತೆರವು ಕಾರ್ಯಾಅಚರಣೆ ಬಳಿಕ ಇದೀಗ ರಾಜಕಾಲುವೆ ಒತ್ತುವರಿದಾರರಿಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬಿಗ್ ಶಾಕ್ ನೀಡಿದೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಗರಾಭಿವೃದ್ದಿ ಸಚಿವ ಕೃಷ್ಣ ಭೈರೇಗೌಡ, ರಾಜಕಾಲುವೆ ಒತ್ತುವರಿಯನ್ನು ನಾವು ತೆರವು ಮಾಡುವ ಕಾರ್ಯ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ 860 ಕಿ.ಮೀ. ರಾಜಕಾಲುವೆ ವ್ಯಾಪ್ತಿ ಇದ್ದು, ಈಗಾಗಲೇ ಅಂದಾಜು 600 ಕಿ.ಮೀ. ವ್ಯಾಪ್ತಿ ಅಭಿವೃದ್ಧಿ ಮಾಡಿದ್ದೇವೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ವೇಳೆ 400 ಕಿ.ಮೀ. ಮತ್ತು ಬಿಜೆಪಿ ಅವರ ಅಧಿಕಾರಾವಧಿಯಲ್ಲಿ 150 ಕಿ.ಮೀ. ಅಭಿವೃದ್ಧಿಯಾಗಿದೆ. ಹೀಗಾಗಿ ಉಳಿದಿರುವ 260 ಕಿ.ಮೀ. ರಾಜಕಾಲುವೆ ಅಭಿವೃದ್ಧಿ ಆಗಬೇಕಿದೆ. ವಿಶ್ವ ಬ್ಯಾಂಕ್ ಸಹಾಯದೊಂದಿಗೆ ಈ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳುತ್ತೇವೆ. ಈ ವೇಳೆ ಒತ್ತುವರಿ ತೆರವು ಕೂಡ ಮಾಡಿಯೇ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

