ಸಾಮಾನ್ಯ ಪಲಾವ್ ಮಾಡಿ ಬೋರ್ ಆಗಿದ್ದರೆ, ಪ್ರೋಟೀನ್‌ನಿಂದ ಸಮೃದ್ಧವಾಗಿರುವ ಕಪ್ಪು ಮಸೂರ್ ದಾಲ್ (ಕಲಿ ಮಸೂರ್) ಪುಲಾವ್ ಮಾಡುವುದು ಅತ್ಯುತ್ತಮ ಆಯ್ಕೆ. ರುಚಿಯ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದಾಗಿರುವ ಈ ಖಾದ್ಯವನ್ನು ಸುಲಭವಾಗಿ ಮನೆಯಲ್ಲೇ ಸಿದ್ಧಪಡಿಸಬಹುದು.
ಅಗತ್ಯವಿರುವ ಸಾಮಗ್ರಿಗಳು
-
ಬಾಸ್ಮತಿ ಅಕ್ಕಿ – 2 ಕಪ್
-
ಕಪ್ಪು ಮಸೂರ್ ಬೇಳೆ – 2 ಕಪ್
-
ಈರುಳ್ಳಿ – 1 (ಉದ್ದಕ್ಕೆ ಹೆಚ್ಚಿದ್ದು)
-
ಟೊಮೆಟೊ – 2 (ಹೆಚ್ಚಿದ್ದು)
-
ಜಿಂಜರ್ ಗಾರ್ಲಿಕ್ ಪೇಸ್ಟ್ – 2 ಚಮಚ
-
ಹಸಿಮೆಣಸಿನಕಾಯಿ – 2
-
ಜೀರಿಗೆ – 1 ಚಮಚ
-
ಅರಿಶಿನ ಪುಡಿ – 1 ಚಮಚ
-
ಕೊತ್ತಂಬರಿ ಪುಡಿ – 1 ಚಮಚ
-
ಗರಂ ಮಸಾಲ – 1 ಚಮಚ
-
ಚಕ್ಕೆ – 1 ತುಂಡು
-
ಏಲಕ್ಕಿ – 4
-
ಲವಂಗ – 4
-
ಪಲಾವ್ ಎಲೆ – 1
-
ಕೊತ್ತಂಬರಿ ಸೊಪ್ಪು – ಸ್ವಲ್ಪ
-
ತುಪ್ಪ ಮತ್ತು ಉಪ್ಪು – ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ
-
ಮೊದಲಿಗೆ ಕಪ್ಪು ಮಸೂರ್ ಬೇಳೆಯನ್ನು ಕನಿಷ್ಠ 8 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ನೆನೆಸಿಡಿ. ನಂತರ ಬಾಸ್ಮತಿ ಅಕ್ಕಿಯನ್ನು ಅರ್ಧ ಗಂಟೆ ನೀರನಲ್ಲಿ ನೆನೆಸಿ.
-
ಒಂದು ಪಾತ್ರೆಯಲ್ಲಿ ನೀರು ಕಾಯಿಸಿ, ನೆನೆಸಿದ ಅಕ್ಕಿ ಮತ್ತು ಸ್ವಲ್ಪ ಉಪ್ಪು ಹಾಕಿ ಅರ್ಧದಷ್ಟು ಬೆಂದ ನಂತರ ನೀರು ಬಸಿಯಿರಿ.
-
ಈಗ ಕುಕ್ಕರ್‌ನಲ್ಲಿ ತುಪ್ಪ ಕಾಯಿಸಿ ಜೀರಿಗೆ, ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ ಹಾಗೂ ಹಸಿಮೆಣಸಿನಕಾಯಿ ಹಾಕಿ ಒಗ್ಗರಣೆ ಕೊಡಿ. ನಂತರ ಈರುಳ್ಳಿ ಮತ್ತು ಜಿಂಜರ್ ಗಾರ್ಲಿಕ್ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.
-
ಬಳಿಕ ಟೊಮೆಟೊ, ಅರಿಶಿನ, ಖಾರದ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಟೊಮೆಟೊ ಮೆತ್ತಗಾಗುವವರೆಗೆ ಬೇಯಿಸಿ.
-
ಈ ಮಸಾಲೆಗೆ ನೆನೆಸಿದ ಮಸೂರ್ ಬೇಳೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
-
ನಂತರ ಅರ್ಧ ಬೆಂದಿರುವ ಅಕ್ಕಿಯನ್ನು ಸೇರಿಸಿ, ಅಕ್ಕಿ ಮುರಿಯದಂತೆ ಮೆಲ್ಲನೆ ಕಲಸಿ. ಅಗತ್ಯಕ್ಕೆ ತಕ್ಕಷ್ಟು (ಸುಮಾರು 2 ಕಪ್) ನೀರು ಸೇರಿಸಿ, ಕುಕ್ಕರ್ ಮುಚ್ಚಳ ಮುಚ್ಚಿ 3 ವಿಸಿಲ್ ಕೂಗಿಸಿ.
-
ಕುಕ್ಕರ್ ತಣ್ಣಗಾದ ಮೇಲೆ ಮುಚ್ಚಳ ತೆಗೆದು, ಮೇಲಿಂದ ಕೊತ್ತಂಬರಿ ಸೊಪ್ಪು ಉದುರಿಸಿದರೆ ಗಮಗಮಿಸುವ ಕಪ್ಪು ಮಸೂರ್ ಪುಲಾವ್ ಸಿದ್ಧ.

