ನವದೆಹಲಿ: ನೀಟ್ ಪರೀಕ್ಷಾ ಅಕ್ರಮ ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ ಕಾರ್ಯಕರ್ತರು, ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ.
ನೀಟ್ ಅಕ್ರಮದ ವಿರುದ್ಧ ಸಿಡಿದೆದ್ದ ಯುವ ಜನತೆಯ ಸಹನೆ ಕಟ್ಟೆಯೊಡೆದಿದ್ದು, ಬೀದಿಗಿಳಿದು ಹೋರಾಟ ನಡೆಸುತ್ತಿದ್ದು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಕಾಕ್ರೋಚ್ ಜನತಾ ಪಾರ್ಟಿ ಹಮ್ಮಿಕೊಂಡಿದ್ದ ಸಂಸತ್ ಚಲೋಗೆ ದೆಹಲಿ ಪೊಲೀಸರು ನಿರ್ಬಂಧ ವಿಧಿಸಿದ್ದರೂ ಕ್ಯಾರೆ ಎನ್ನದ ಪ್ರತಿಭಟನಾಕಾರರು ಪೊಲೀಸರನ್ನು ನೂಕಿ, ಬ್ಯಾರಿಕೇಡ್ ಗಳನ್ನು ತಳ್ಳಿ ಸಂಸತ್ ಭವನದತ್ತ ಮುನ್ನುಗ್ಗಿದ್ದಾರೆ.
ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಹಾಗೂ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ವಿಪಕ್ಷಗಳು ಬೆಂಬಲ ನೀಡಿದ್ದು, ಪ್ರತಿಭಟನಾಕಾರರು ಸಂಸತ್ ಭವನಕ್ಕೆ ಮುತ್ತಿಗೆ ಹಾಕುವ ನಿಟ್ಟಿನಲ್ಲಿ ಮುನ್ನುಗ್ಗುತ್ತಿದ್ದಾರೆ. ಭದ್ರತೆಗಾಗಿ ಪೊಲೀಸರು ಸಂಸತ್ ಭವನದ ಎಲ್ಲಾ ಗೇಟ್ ಗಳನ್ನು ಬಂದ್ ಮಾಡಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಆದರೆ ಸಾವಿರಾರು ಪ್ರತಿಭಟನಾಕಾರರು ಸಂಸತ್ ಭವನದ ಮುಖ್ಯ ದ್ವಾರದ ಬಳಿ ಜಮಾವಣೆಗೊಂಡಿದ್ದು, ಕೇಂದ್ರ ಸರ್ಕಾರದ ವಿರುದ್ಧ ಹಾಗೂ ಶಿಕ್ಷಣ ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಒಂದೆಡೆ ಲಾಠಿ ಚಾರ್ಜ್ ಮಾಡುತ್ತಿದ್ದರೆ, ಮತ್ತೊಂದೆಡೆ ಜಲಫಿರಂಗಿ ಪ್ರಯೋಗ ಮಾಡಿದ್ದಾರೆ. ಯಾವುದಕ್ಕೂ ಬಗ್ಗದ ವಿದ್ಯಾರ್ಥಿ ಪ್ರತಿಭಟನಾಕಾರರು ಸಾಗರೋಪಾದಿಯಲ್ಲಿ ಆಗಮಿಸಿ ಪ್ರತಿಭಟನೆ ಮುಂದುವರೆಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಮತ್ತೊಂದೆಡೆ ಸಂಸತ್ ಭವನದತ್ತ ಮುನ್ನುಗ್ಗಲು ದೆಹಲಿಯ ವಿವಿಧ ಭಾಗಗಳಿಂದ ಪ್ರತಿಭಟನಾಕಾರರು ಆಗಮಿಸುತ್ತಿದ್ದು, ದೆಹಲಿಯ ರಾಜೀವ್ ಚೌಕ್ ಮೆಟ್ರೋ ನಿಲ್ದಾಣದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಪ್ರತಿಭಟನಾಕಾರರು ಮೆಟ್ರೋ ನಿಲ್ದಾಣದ ಮೂಲಕವಾಗಿ ಸಾಗುತ್ತಿದ್ದು, ಪೊಲೀಸರು ತಡೆ ನೀಡಲು ಬ್ಯಾರಿಕೇಡ್ ಗಳನ್ನು ಅಳವಡಿಸಿದ್ದಾರೆ. ಆದರೆ ಪ್ರತಿಭಟನಾಕಾರರ ಆಕ್ರೋಶಕ್ಕೆ ಬ್ಯಾರಿಕೆಡ್ ಗಳು ನೆಲಸಮವಾಗಿವೆ. ಅವುಗಳನ್ನು ತಳ್ಳಿ, ಗೇಟ್ ಗಳನ್ನು ಹತ್ತಿ ವಿದ್ಯಾರ್ಥಿಗಳು ಮುನ್ನುಗ್ಗಿದ್ದಾರೆ. ಸಿಡಿದೆದ್ದಿರುವ ಯುವಜನತೆಯನ್ನು ತಡೆಯಲು ಪೊಲೀಸರು ಹರಸಾಹಸಪಟ್ಟರು ಸಾಧ್ಯವಾಗಿಲ್ಲ. ಜಂತರ್- ಮಂತರ್ ನಿಂದ ನಾಲ್ಕು ಕೀ.ಮಿವರೆಗೆ ಟ್ರಾಫಿಕ್ ಜಾಮ್ ಸಂಭವಿಸಿದೆ.
ವಿದ್ಯಾರ್ಥಿಗಳ ಕಿಚ್ಚು ಹೆಚ್ಚುತ್ತಿದ್ದಂತೆ ಕೇಂದ್ರ ಸರ್ಕಾರ ಸಚಿವ ಜೆ.ಪಿ ನಡ್ಡಾ ಅವರನ್ನು ಪ್ರತಿಭಟನಾಕರರೊಂದಿಗೆ ಮಾತುಕತೆಗೆ ಕಳುಹಿಸುವ ಭರವಸೆ ನೀಡಿದೆ. ಇನ್ನೊಂದೆಡೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಕರೆದು ಚರ್ಚಿಸುತ್ತಿದ್ದು, ಸರ್ಕಾರದ ನಡೆ ಕುತೂಹಲ ಮೂಡಿಸಿದೆ.ವಿದ್ಯಾರ್ಥಿಗಳ ಕಿಚ್ಚು ಹೆಚ್ಚುತ್ತಿದ್ದಂತೆ ಕೇಂದ್ರ ಸರ್ಕಾರ ಸಚಿವ ಜೆ.ಪಿ ನಡ್ಡಾ ಅವರನ್ನು ಪ್ರತಿಭಟನಾಕರರೊಂದಿಗೆ ಮಾತುಕತೆಗೆ ಕಳುಹಿಸುವ ಭರವಸೆ ನೀಡಿದ್ದು, ಸರ್ಕಾರದ ನಡೆ ಕುತೂಹಲ ಮೂಡಿಸಿದೆ.

